ಚಿಕ್ಕಮಗಳೂರು: ನ್ಯಾಯಾಧೀಶರಾಗುವವರಲ್ಲಿ ನ್ಯಾಯಿಕ ಮನೋಧರ್ಮ ಇರಬೇಕು. ಇಂತಹ ಗುಣ ಚಿಕ್ಕಮಗಳೂರಿನ ಯುವಕರಲ್ಲಿ ಹೆಚ್ಚಿದೆ ಎಂದು ಜಿಲ್ಲೆಯಿಂದ ಉಚ್ಛನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಎಚ್.ಟಿ.ನರೇಂದ್ರ ಪ್ರಸಾದ್ ಹೇಳಿದರು.
ನ.ರಾ.ಪುರ ತಾಲ್ಲೂಕಿನ ಮಡಬೂರಿನವರಾದ ನರೇಂದ್ರ ಪ್ರಸಾದ್ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಚಿಕ್ಕಮಗಳೂರು ವಕೀಲರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಹಾಗೂ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ನ್ಯಾಯಿಕ ಮನೋಧರ್ಮದ ಗುಣಮಟ್ಟ ಇರುವುದೇ ನಮ್ಮ ಚಿಕ್ಕಮಗಳೂರು ಯುವಕರಲ್ಲಿ. ಕೇವಲ ವಿದ್ಯಾಭ್ಯಾಸ ಮಾಡಿ ಕಾನೂನನ್ನು ಚೆನ್ನಾಗಿ ತಿಳಿದುಕೊಂಡ ಮಾತ್ರಕ್ಕೆ ನ್ಯಾಯಾಧೀಶರಾಗಲು ಆಗುವುದಿಲ್ಲ. ನ್ಯಾಯಿಕ ಮನೋಧರ್ಮ ಇರಬೇಕು. ಇದಕ್ಕೆ ಸ್ವಲ್ಪ ಸಮಾಧಾನವಾಗಿ ಕೆಲಸ ಮಾಡುವ ಅನುಭವ ಇರಬೇಕು. ಅದು ನಮ್ಮ ಗುಣ ಆದರೂ ಹೈಕೋರ್ಟ್‌ನಲ್ಲಿ ನಮ್ಮ ಪ್ರಾತಿನಿಧ್ಯ ಕಡಿಮೆ ಆಗಿದೆ ಎಂದರು.
ಧಾರವಾಡ, ಗುಲ್ಬರ್ಗದಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದೇವೆ. ಇಲ್ಲಿ ಸಿಕ್ಕ ಗೌರವ ನಮ್ಮ ಹೃದಯವನ್ನು ಸ್ಪರ್ಶಿಸಿದೆ. ನಮ್ಮ ಜಿಲ್ಲೆಯಿಂದ ಒಬ್ಬರು ಹೈಕೋರ್ಟ್ ನ್ಯಾಯಾಧೀಶರಾಗಲು ೭೦ ವರ್ಷ ಬೇಕಾಯಿತು ಎನ್ನುವ ವಿಷಾಧವಿದೆ. ಇದರಲ್ಲಿ ನಮ್ಮ ತಪ್ಪೂ ಇದೆ. ವಿದ್ಯಾಭ್ಯಾಸವನ್ನು ಮಂಗಳೂರು, ಬೆಂಗಳೂರು ಅಥವಾ ಮೈಸೂರಿನಲ್ಲಿ ಮಾಡುತ್ತೇವೆ. ವಿದ್ಯಾಭ್ಯಾಸ ಮುಗಿಸಿ ಶೇ.೯೦ ರಷ್ಟು ಮಂದಿ ಮತ್ತೆ ತವರಿಗೆ ವಾಪಾಸಾಗಿ ಇಲ್ಲಿ ಕೃಷಿಗೆ ಉತ್ತಮ ಅವಕಾಶವಿದೆ ಎಂದು ಅದಕ್ಕೆ ಒತ್ತುಕೊಡುತ್ತಾರೆ. ವಕೀಲ ವೃತ್ತಿಗೆ ಹೋಗುವವರೇ ಕಡಿಮೆ ಎಂದರು.
ವಕೀಲ ವೃತ್ತಿ ಒಂದು ಉದಾತ್ತ ಸೇವೆ, ಬಹುತೇPರಿಗೆ ಐಟಿ ಉದ್ಯೋಗಿಗಳು ಒಳ್ಳೆ ಸೂಟ್ ಹಾಕಿಕೊಂಡು ಹೋಗುತ್ತಾರೆ ಎನ್ನಿಸಬಹುದು. ಆದರೆ ಎಲ್ಲದಕ್ಕಿಂತ ವಕೀಲ ವೃತ್ತಿ ಶ್ರೇಷ್ಠವಾಗಿದ್ದು, ಎಂದಿಗೂ ಈ ವೃತ್ತಿಗೆ ಬಂದು ತಪ್ಪು ಮಾಡಿಕೊಂಡೆ ಎಂದು ಅಂದುಕೊಳ್ಳಬೇಡಿ. ಈ ದೇಶದ ಸ್ವಾತಂತ್ರ್ಯ ಹೊರಾಟದ ಮುಂಚೂಣಿಯಲ್ಲಿದ್ದವರೆಲ್ಲ ವಕೀಲರಾಗಿದ್ದವರೆ ಎಂದರು.
ಹೈಕೊರ್ಟ್ ಜಡ್ಜ್ ಆಗಲು ತಂದೆ ಇತರೆ ಸಂಬಂಧಿಕರು ಜಡ್ಜ್ ಆಗಿದ್ದರೆ ಮಾತ್ರ ಸಾಧ್ಯ, ಇಲ್ಲವೇ ಯಾರದ್ದೂ ಶಿಫಾರಸ್ಸಿರಬೇಕು ಎನ್ನುವುದೆಲ್ಲ ಸುಳ್ಳು. ಅದಕ್ಕೆ ನಾನೇ ಉದಾಹರಣೆ. ನಮ್ಮೂರಿನಲ್ಲಿ ನಾನೇ ಮೊದಲ ಕಾನೂನು ಪದವಿಧರ. ಬೆಂಗಳೂರಿಗೆ ಹೋದಾಗಲೂ ಯಾವ ಹಿರಿಯ ವಕೀಲರ ಪರಿಚಯ ಇರಲಿಲ್ಲ. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಎಂದಿದ್ದರೂ ಮನ್ನಣೆ ಸಿಕ್ಕೇ ಸಿಗುತ್ತದೆ. ಯಾವುದೇ ಜಾತಿಯ ಪ್ರಶ್ನೆ ಇಲ್ಲಿ ಇರುವುದಿಲ್ಲ. ಪರಿಶ್ರಮ ಇದ್ದರೆ ಯಾವುದೇ ಗುರಿಯನ್ನು ತಲುಪಬಹುದು ಅದು ನಮ್ಮ ಪ್ರಜಾಪ್ರಭುತ್ವದ ಸೌಂದರ್ಯ ಎಂದರು.
ಯುವ ವಕೀಲರು ಪರೀಕ್ಷೆಗಳನ್ನು ಬgಯಬೇಕು. ನುರಿತ ವಕೀಲರನ್ನು ಕರೆಸಿ ವಿಚಾರ ಸಂಕಿರಣಗಳನ್ನು ಏರ್ಪಡಿಸಬೇಕು. ಸುಮ್ಮನೆ ಕೋರ್ಟ್‌ಗೆ ಬಂದು ಹೋದರೆ ಸಾಲದು ಎಂದು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯ, ಕರ್ನಾಟಕ ವಕೀಲರ ಸಂಘದ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ವಕೀಲರು ಏನಪ್ಪಾ ನಾವು ವೃತ್ತಿಯನ್ನು ಆಯ್ಕೆ ಮಾಡಿಕೊಂಡೆವಲ್ಲ ಎಂದುಕೊಳ್ಳಬಾರದು. ಯಾವುದೇ ವೃತ್ತಿಯನ್ನು ಅಪ್ಪಿಕೊಂಡು ಪ್ರೀತಿಸಬೇಕಾಗುತ್ತದೆ. ಅದರಲ್ಲಿ ತಲ್ಲೀನರಾಗಬೇಕಾಗುತ್ತದೆ. ಅನೇಕ ಸರ್ಕಾರಿ ವಕೀಲರು ಫೈಲ್‌ಗಳನ್ನೇ ನೋಡಿರುವುದಿಲ್ಲ. ಕೋರ್ಟ್ ಇದನ್ನೆಲ್ಲಾ ತುಂಬಾ ಗಂಭೀರವಾಗಿ ಗಮನಿಸುತ್ತದೆ. ಅವರ ಸೇವಾ ಅವಧಿಯ ಸಾಧನೆಯ ದಾಖಲೆಗಳನ್ನು ಪರಿಗಣಿಸಿ ನ್ಯಾಯಾಧೀಶರ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕರಾರುವಕ್ಕಾಗಿ ವಾದ ಮಂಡಿಸಬೇಕಾಗುತ್ತದೆ ಎಂದರು.
ಇಂತಹ ಸರ್ಕಾರಿ ವಕೀಲರು ಹೇಳಿದ್ದಾರೆ ಎಂದರೆ ಅದನ್ನು ನ್ಯಾಯಾಧೀಶರು ಕೂಡಲೇ ಒಪ್ಪುವಂತಿರಬೇಕು. ಅದನ್ನು ಅನುಮಾನದಲ್ಲಿ ನೋಡುವಂತಾಗಬಾರದು. ಎಂದೂ ಅನುಮಾನಕ್ಕೆಡೆಮಾಡಿಕೊಡದೆ ನಿರಂತರ ಕಾಯಕ ಮಾಡಿದ ಫಲವಾಗಿ ನರೇಂದ್ರ ಪ್ರಸಾದ್ ಅವರಿಗೆ ಇಂದು ನ್ಯಾಯಾಧೀಶರ ಹುದ್ದೆ ಲಭಿಸಿದೆ ಎಂದರು.
ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಥೋಮಸ್ ಮಾತನಾಡಿ, ಕಂದಾಯ ವಿಷಯ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ತುಂಬಾ ಜ್ಞಾನವನ್ನು ನರೇಂದ್ರ ಪ್ರಸಾದ್ ಹೊಂದಿದ್ದಾರೆ. ಅಂತಹವರು ಇದ್ದಾಗ ಈಗ ಇರುವ ನ್ಯಾಯಾಂಗ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯ ಎಂದರು.
ಒಂದನೆ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಧೀಶರಾದ ಪುಷ್ಪಾಂಜಲಿ, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ. ಕೆ.ಶಿಲ್ಪಾ, ಪ್ರಧಾನ ಸಿವಿಲ್ ಲಕ್ಷ್ಮೀಶ್ ಇತರೆ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಿರಿಯ ವಕೀಲ ಎಸ್.ಎಸ್.ವೆಂಕಟೇಶ್ ಸ್ವಾಗತಿಸಿ, ಸುಜೇಂದ್ರ ನಿರೂಪಿಸಿ, ದೇವರಾಜ್ ವಂದಿಸಿದರು.
Discussion about this post