ಚಿಕ್ಕಮಗಳೂರು: ಗುರು ದತ್ತಾತ್ರೇಯ ಸ್ವಾಮಿ ಬಾಬಾ ಬುಡನ್ ದರ್ಗಾ ವಿವಾದ ಸಂಬಂಧ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಸಚಿವ ಸಂಪುಟ ಮಟ್ಟದಲ್ಲಿ ಉಪಸಮಿತಿಯನ್ನು ರಚಿಸಿದ್ದು, ವಿವಾದ ಸಂಬಂಧ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿರುವುದು ಹಾಗೂ ಬೆಂಗಳೂರಿಗೆ ಬಂದು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿರುವುದು ಸರಿಯಲ್ಲ ಎಂದು ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಅಜ್ಮತ್‌ಪಾಶ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಗುರು ದತ್ತಾತ್ರೇಯ ಸ್ವಾಮಿ ಬಾಬಾ ಬುಡನ್ ದರ್ಗಾ ವಿವಾದ ಸಂಬಂಧ ಹೈಕೋರ್ಟ್ ಹಿಂದಿನ ರಾಜ್ಯ ಸರಕಾರದ ವರದಿಯನ್ನು ರದ್ದುಪಡಿಸಿ ಹೊಸದಾನಿ ವರದಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಅದರಂತೆ ರಾಜ್ಯ ಸರಕಾರ ಇತ್ತೀಚೆಗೆ ಉಪಸಮಿತಿಯನ್ನು ರಚನೆ ಮಾಡಿದ್ದು, ಗುರು ದತ್ತಾತ್ರೇಯ ಸ್ವಾಮಿ ಬಾಬಾ ಬುಡನ್ ದರ್ಗಾ ವಿವಾದ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ 30 ದಿನಗಳ ಕಾಲಾವಕಾಶವನ್ನು ನೀಡಿದ್ದರೂ ಆಕ್ಷೇಪಣೆಗಳನ್ನು ಬೆಂಗಳೂರಿಗೆ ಆಗಮಿಸಿದ ಸಲ್ಲಿಸುವಂತೆ ಹೇಳಿರುವುದು ಸರಿಯಲ್ಲ. ಮಲೆನಾಡು ಹಾಗೂ ಬೆಂಗಳೂರು ಭಾಗದಲ್ಲಿ ಸದ್ಯ ಭಾರೀ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯವರು ಮಳೆಯಲ್ಲಿ ಬೆಂಗಳೂರಿಗೆ ಆಗಮಿಸಿ ಆಕ್ಷೇಪಣೆಗಳನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಗುರು ದತ್ತಾತ್ರೇಯ ಸ್ವಾಮಿ ಬಾಬಾ ಬುಡನ್ ದರ್ಗಾ ವಿವಾದ ಸಂಬಂಧ ಜಿಲ್ಲೆಯಿಂದ ಅನೇಕ ಮಂದಿ ಆಕ್ಷೇಪಣೆ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಇವರಿಗೆ ಬೆಂಗಳೂರಿಗೆ ಹೋಗಿ ಸಕಾಲದಲ್ಲಿ ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆಕ್ಷೇಪಣೆ ಸಲ್ಲಿಕೆಗೆ ನೀಡಿರುವ ಕಾಲಾವಕಾಶವನ್ನು ವಿಸ್ತರಣೆ ಮಾಡಬೇಕು ಹಾಗೂ ಸ್ಥಳೀಯರು ಆಕ್ಷೇಪಣೆ ಸಲ್ಲಿಸಲು ಚಿಕ್ಕಮಗಳೂರು ನಗರದಲ್ಲೇ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿಯಲ್ಲಿ ಅಜ್ಮತ್ ಪಾಶ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
Discussion about this post