ನವದೆಹಲಿ: ಭಯೋತ್ಪಾದಕ ಸಂಘಟನೆಗಳ ಬಗ್ಗೆ ಸಹಾನುಭೂತಿ ಮತ್ತು ನಂಟು ಹೊಂದಿರುವ ಶಂಕೆಯ ಮೇರೆಗೆ ಜಮ್ಮು-ಕಾಶ್ಮೀರದಲ್ಲಿ ಕಳೆದ ಆರು ದಿನಗಳಲ್ಲಿ ಸುಮಾರು 700 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಕಾಶ್ಮೀರಿ ಪಂಡಿತರು, ಸಿಖ್ ಹಾಗೂ ಮುಸ್ಲಿಂ ಸಮುದಾಯದ ಏಳು ಮಂದಿ ನಾಗರಿಕರನ್ನು ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ನಾಗರಿಕರ ಹತ್ಯೆಯ ತನಿಖೆಯ ಜಾಡು ಹಿಡಿದ ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ ಎಂದು ‘ಎನ್‌ಡಿಟಿವಿ” ವರದಿ ಮಾಡಿದೆ.
ಪೊಲೀಸರು ವಶಕ್ಕೆ ಪಡೆದಿರುವವರ ಪೈಕಿ ಕೆಲವರು ‘ಜಮಾತ್ ಏ ಇಸ್ಲಾಮಿ’ ಉಗ್ರ ಸಂಘಟನೆ ಜತೆ ನಂಟು ಹೊಂದಿದ್ದರು ಎನ್ನಲಾಗಿದೆ. ಇವರೆಲ್ಲ ದಕ್ಷಿಣ ಕಾಶ್ಮೀರದ ಶ್ರೀನಗರ, ಬುದ್ಗಾಂವ್ ಪ್ರದೇಶದವರು ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಜಾಗತಿಕ ಅತಿ ಶ್ರೀಮಂತರ ಪಟ್ಟಿಗೆ ಮುಕೇಶ್ ಅಂಬಾನಿ ಸೇರ್ಪಡೆ
ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಉಗ್ರ ದಾಳಿಗಳ ಸರಪಳಿಯನ್ನು ಮುರಿಯುವುದಕ್ಕಾಗಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿರುವುದು, ತಾಲಿಬಾನ್ ಉಗ್ರರಿಂದಲೂ ಭಾರತಕ್ಕೆ ಬೆದರಿಕೆ ಇರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯರ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯುವಲ್ಲಿ ಆಡಳಿತ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಕಣಿವೆಯ ಸ್ಥಿತಿಗತಿ ಪರಿಶೀಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ರಾಜ್ಯಕ್ಕೆ ಭೇಟಿ ನೀಡಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಆಗ್ರಹಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಆಡಳಿತವು ಮಹತ್ವದ ಕ್ರಮ ಕೈಗೊಂಡಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಕೇಂದ್ರ ಸಚಿವ ಮಿಶ್ರಾ ಪುತ್ರ ಆಶಿಶ್ ಬಂಧನ
Discussion about this post