ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ. ಮಾನವ ಪ್ರಯತ್ನದ ಜೊತೆಗೆ ಗ್ರಹಗತಿಗಳ ಪ್ರಭಾವವೂ ಮನುಷ್ಯರ ಬದುಕಿನ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡರೆ ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ದೋಷಪೂರಿತರಾದ ಗ್ರಹಗಳಿಂದ ತೊಂದರೆ ಎದುರಿಸುತ್ತಿರುವವರು ಶಾಂತಿಗೆ ಸುಲಭ ಪರಿಹಾರ ಕ್ರಮಗಳನ್ನು ಅನುಸರಿಸಬಹುದು ಎನ್ನುತ್ತಾರೆ ಗೌರಿಬಿದನೂರಿನ ಜ್ಯೋತಿಷಿ ಪಂಡಿತ್ ರಾಮಕೃಷ್ಣ ಗುಂಜೂರ್. ಗ್ರಹಗತಿಗಳ ಸಮಸ್ಯೆ ಸುಲಭದ ಪರಿಹಾರ ಜೊತೆಗೆ ವಾರ ಭವಿಷ್ಯದ ವಿವರವೂ ಈ ಬರಹದಲ್ಲಿದೆ.
ಶನಿದೋಷವಿದ್ದಲ್ಲಿ ಶನಿವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ 9 ಕರ್ಪೂರಗಳನ್ನು ದೇವರ ಗರ್ಭಗುಡಿಯ ಮುಂದೆ ಹಚ್ಚಿ, 9 ಪ್ರದಕ್ಷಿಣೆಗಳನ್ನು ಮಾಡಿ, ಆಂಜನೇಯನ ಪ್ರಾರ್ಥನೆ ಮಾಡಿ. ಶನಿಮಹಾತ್ಮನ ದೇವಾಲಯಕ್ಕೆ ಹೋಗಿ 9 ಎಳ್ಳುಬತ್ತಿಗಳನ್ನು ಹಚ್ಚಿ, 9 ಪ್ರದಕ್ಷಿಣೆಗಳನ್ನು ಮಾಡಿ ಪ್ರಾರ್ಥಿಸಿಕೊಳ್ಳಿ. ಗುರುಬಲವಿಲ್ಲದಿದ್ದರೆ ಗೋಪೀಚಂದನ ಅಥವಾ ಶ್ರೀಗಂಧವನ್ನು ಹಣೆಗೆ ಮತ್ತು ಹೊಕ್ಕಳಿಗೆ ಹಚ್ಚಿಕೊಳ್ಳಿ. ಗುರುವಾರದಂದು ರಾಘವೇಂದ್ರ ಸ್ವಾಮಿಗಳ ಮಠದಲ್ಲಾಗಲೀ ಅಥವಾ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಾಗಲೀ ಕಡಲೇಕಾಳಿನಿಂದ ಮಾಡಿದ ಪ್ರಸಾದವನ್ನು ಹಂಚಿ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೂ ಗುರುವಿನ ವಿಶೇಷ ಅನುಗ್ರಹ ಸಿಗುತ್ತದೆ.
ಮಂಗಳಗ್ರಹದ ಸಮಸ್ಯೆಯಿದ್ದಲ್ಲಿ, ದೇವಿಯ ಆರಾಧನೆ ಅಥವಾ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದರಿಂದ ಅನುಕೂಲವಾಗುತ್ತದೆ. ರಾಹುಗ್ರಹದ ಸಮಸ್ಯೆಯಿದ್ದಲ್ಲಿ ರಾಹುವಿಗೇ ವಿಶೇಷ ಪ್ರಾರ್ಥನೆ ಮಾಡಬೇಕು ಅಥವಾ ನಾಗನಿಗೆ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಅಶ್ವತ್ಥಕಟ್ಟೆಗೆ ಪೂಜೆ ಮಾಡುವುದರಿಂದ ರಾಹು-ಕೇತು ಇಬ್ಬರ ಶಾಂತಿಯಾಗುತ್ತದೆ. ಚಂದ್ರ ದೋಷಪೂರಿತನಾಗಿದ್ದರೆ ಶಿವನ ಆರಾಧನೆ ಮಾಡುವುದರಿಂದ ಅನುಕೂಲವಾಗುತ್ತದೆ.
ಈಗ ಪ್ರತಿ ರಾಶಿಯ ವಾರ ಭವಿಷ್ಯವನ್ನು ಪರಿಶೀಲಿಸೋಣ. ವಾರ ಭವಿಷ್ಯ – ಸೋಮವಾರದಿಂದ (11/10/2021) ಶನಿವಾರದವರೆಗೆ (16/10/2021).
ಮೇಷ ರಾಶಿ: ಆರೋಗ್ಯಸ್ಥಾನದಲ್ಲಿ ಪಾಪಗ್ರಹ ಇರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಆರೋಗ್ಯದಲ್ಲಿ ಏರಿಳಿತಗಳ ಸಾಧ್ಯತೆ. ಗಾಯ, ಮೊಡವೆ, ಹುಣ್ಣುಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ; ಉಷ್ಣಕ್ಕೆ ಸಂಬಂಧಿಸಿದ ಕಾಯಿಲೆಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಸರಕಾರಿ ಕೆಲಸಗಳಲ್ಲಿ ಅನುಕೂಲಗಳುಂಟಾಗುವ ಸಾಧ್ಯತೆ ಇದೆ. ವಿದ್ಯೆಗೆ ಸಂಬಂಧಪಟ್ಟ ವಿಷಯಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ಸಮಯ ಅನುಕೂಲಕರವಾಗಿದೆ. ಹೆಚ್ಚಿನ ಧನವ್ಯಯವಾಗುವ ಸಂಭವವಿದೆ. ಹೆಚ್ಚಿನ ಶುಭಫಲಗಳನ್ನು ಪಡೆಯಬೇಕಾದರೆ ಈ ರಾಶಿಯವರು ಮಂಗಳನ ಅಥವಾ ದೇವಿಯ ಆರಾಧನೆ ಮಾಡಬೇಕು. ಆರೋಗ್ಯದ ಸಮಸ್ಯೆಗಳಿಂದ ಪಾರಾಗಲು/ಕಾಯಿಲೆಗಳನ್ನು ನಿವಾರಣೆ ಮಾಡಿಕೊಳ್ಳಲು ಶಿವನ ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ.
ವೃಷಭ ರಾಶಿ: ಮನಸ್ಸಿಗೆ ಹೆಚ್ಚು ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಆದರೂ, ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಸರಕಾರಿ ಕೆಲಸಗಳಲ್ಲಿ ಪ್ರಗತಿಯಿದೆ. ಉಳಿದೆಲ್ಲ ವಿಷಯಗಳೂ ಚೆನ್ನಾಗಿದ್ದು, ನಿಮ್ಮ ರಾಶಿಯಲ್ಲೇ ರಾಹು ಇರುವುದರಿಂದ ರಾಹುಶಾಂತಿ ಮಾಡಿಕೊಳ್ಳುವುದು.
ಮಿಥುನ ರಾಶಿ: ಮಕ್ಕಳಿಂದ ಮಾತಾ-ಪಿತೃಗಳಿಗೆ ವಿಶೇಷ ಪ್ರೀತಿ ಸಿಗುತ್ತದೆ, ಒಟ್ಟಿಗೆ ಕಾಲ ಕಳೆಯುವ ಸಾಧ್ಯತೆ. ಹಣಕಾಸಿನ ಸ್ಥಿತಿ ಉತ್ತಮವಿದ್ದರೂ, ಶುಭಕಾರ್ಯಗಳಿಗೆ ಅಡಚಣೆಯುಂಟಾಗುವ ಸಾಧ್ಯತೆಯಿರುವುದರಿಂದ ಶುಭಕಾರ್ಯಗಳನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ. ಶುಭಕಾರ್ಯಗಳನ್ನು ಮಾಡಲೇಬೇಕಾದ ಪರಿಸ್ಥಿತಿಯಿದ್ದರೆ ಗುರು ಹಾಗೂ ಶನಿಗ್ರಹರಿಗೆ ಸೂಕ್ತ ಶಾಂತಿ ಮಾಡಿಸಿ ಮುಂದುವರೆದರೆ ವಿಶೇಷ ಫಲ ಸಿಗುತ್ತದೆ.
ಕಟಕ ರಾಶಿ: ಮಕ್ಕಳ ವಿಷಯದಲ್ಲಿ ಏನೋ ಚಿಂತೆಯಿರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಿದೆ. ಆದರೂ, ಮನಸ್ಸಿನಲ್ಲಿ ಏನೋ ಅಸಂತೃಪ್ತಿ ಇದ್ದೇ ಇರುತ್ತದೆ. ಶನಿ ದೋಷಪೂರಕವಾಗಿರುವುದರಿಂದ ಶನಿ ಶಾಂತಿ ಮಾಡಿಸುವುದರಿಂದ ಶುಭಫಲ ಉಂಟಾಗುತ್ತದೆ.
ಸಿಂಹ ರಾಶಿ: ಭೂಮಿಗೆ ಸಂಬಂಧಪಟ್ಟ ಯಾವುದೇ ಕೆಲಸಗಳನ್ನು ಕೈಗೆತ್ತಿಕೊಳ್ಳದಿರುವುದೇ ಒಳ್ಳೆಯದು. ಇತರೆ ಸರಕಾರಿ ಉದ್ಯೋಗ ಅಥವಾ ಸರಕಾರಿ ಕೆಲಸಗಳನ್ನು ಮಾದಲು ಅನಕೂಲಕರ ಸಮಯವಾಗಿದೆ. ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಯ ಅತ್ಯಂತ ಸೂಕ್ತವಾಗಿದೆ. ಶುಭಕಾರ್ಯಗಳನ್ನು ಮಾಡಲು ಇದು ಸೂಕ್ತ ಸಮಯವಲ್ಲ. ಶನಿ ಶಾಂತಿ ಮಾಡಿಸಿಕೊಳ್ಳುವುದರಿಂದ ಇನ್ನಷ್ಟು ಶುಭಫಲಗಳುಂಟಾಗುತ್ತವೆ.
ಕನ್ಯಾ ರಾಶಿ: ಶನಿಯು ಪಂಚಮ ಸ್ಥಾನದಲ್ಲಿರುವುದರಿಂದ ಮಕ್ಕಳ ಬಗ್ಗೆ ಏನಾದರೂ ಚಿಂತೆಯಿರುವ ಅಥವಾ ಮಕ್ಕಳಿಂದ ಏನಾದರೂ ಆತಂಕ ಬರುವಂಥ ಸಾಧ್ಯತೆಯಿದೆ, ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳುವುದು ಒಳ್ಳೆಯದು. ಭೂಮಿಗೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನು ಈ ವಾರ ಕೈಗೆತ್ತಿಕೊಳ್ಳದಿರುವುದೇ ಒಳ್ಳೆಯದು. ಸರಕಾರಿ ಕೆಲಸಗಳ ಬಗ್ಗೆ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮವಾದ ಕಾಲವಾಗಿದೆ. ಶನಿ ಶಾಂತಿ ಮಾಡಿಕೊಳ್ಳುವುದರಿಂದ ವಿಶೇಷ ಶುಭಫಲ ಸಿಗುತ್ತದೆ.
ತುಲಾ ರಾಶಿ: ರಾಶಿಯಲ್ಲೇ ಚಂದ್ರನಿರುವುದರಿಂದ ಮನಸ್ಸಿಗೆ ಬೇಸರ ಅಥವಾ ಆತಂಕ ಉಂಟುಮಾಡುವ ಸಂಗತಿಗಳು ನಡೆಯಬಹುದು. ಸರಕಾರ ಸಂಬಂಧಿ ಕೆಲಸಗಳು ಈ ವಾರ ಆಗುವ ಸಾಧ್ಯತೆಗಳಿಲ್ಲ. ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ಒಳ್ಳೆಯದು. ಭೂಮಿಗೆ ಸಂಬಂಧಪಟ್ಟ ಯಾವುದೇ ವ್ಯವಹಾರಗಳು ಒಳ್ಳೆಯದಲ್ಲ. ಎರಡರಲ್ಲಿ ಕೇತು ಇರುವುದರಿಂದ ಹಣ ಖರ್ಚಾಗುವ ಸಾಧ್ಯತೆಯಿದೆ. ನಾಲ್ಕರಲ್ಲಿ ಶನಿ ಮತ್ತು ಗುರು ಇರುವುದರಿಂದ ಸಾಧಾರಣ ಫಲ ಸಿಗಲಿದೆ. ಸಾಧಾರಣ ಫಲ ಇರುವುದರಿಂದ ಈ ವಾರ ಸಮಾಧಾನಕರವಾಗಿರುವುದಿಲ್ಲ. ಆದರೂ, ಶುಕ್ರನ ವಿಶೇಷ ಫಲ ಇರುವುದರಿಂದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ: ರಾಹು ಮತ್ತು ಕೇತುಗಳು ದೋಷಪೂರಕರಾಗಿರುವುದರಿಂದ ಗಂಡ-ಹೆಂಡತಿಯರ ಮಧ್ಯೆ ಏನಾದರೂ ಸಣ್ಣ-ಪುಟ್ಟ ವಿಷಯಗಳಿಗೆ ಕಲಹಗಳುಂಟಾಗಬಹುದು. ಇದನ್ನು ಹೊರತುಪಡಿಸಿದರೆ, ವಿಶೇಷ ಫಲಗಳಿವೆ. ಸರಕಾರಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ಪ್ರಗತಿಯಿದೆ. ಮನಸ್ಸಿಗೆ ಬೇಸರ ಉಂಟುಮಾಡುವ ಸಂಗತಿಗಳು ಈ ವಾರ ನಡೆಯುವ ಸಾಧ್ಯತೆಯಿದೆ. ರಾಹು-ಕೇತುಗಳಿಗೆ ಶಾಂತಿ ಮಾಡುವುದರಿಂದ ಗಂಡ-ಹೆಂಡತಿಯರ ಮಧ್ಯೆ ಬರಬಹುದಾದ ಸಣ್ಣ-ಪುಟ್ಟ ಕಲಹಗಳು ಹಾಗೂ ಮಾನಸಿಕ ಬೇಸರಗಳನ್ನು ತಡೆಗಟ್ಟಬಹುದು.
ಧನಸ್ಸು ರಾಶಿ: ಈ ವಾರ ಸ್ವಲ್ಪ ಆರ್ಥಿಕ ಸುಧಾರಣೆ ಕಾಣುವ ಸಾಧ್ಯತೆಯಿದೆ. ಹಾಗೆಯೇ, ಕೆಲಸ ಕಾರ್ಯಗಳಲ್ಲೂ ಸ್ವಲ್ಪ ಮಟ್ಟಿನ ಪ್ರಗತಿ ಕಾಣಿಸುತ್ತದೆ. ರಾಹು 6ನೇ ಮನೆಯಲ್ಲಿರುವುದರಿಂದ ಆರೋಗ್ಯದಲ್ಲಿ ಕೆಲ ವ್ಯತ್ಯಾಸಗಳುಂಟಾಗುವ ಸಾಧ್ಯತೆಯಿದೆ. ಶಿವನ ಆರಾಧನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಳ್ಳಬಹುದು. ಉಳಿದಂತೆ ಈ ವಾರ ಉತ್ತಮವಾಗಿಯೇ ಇದೆ.
ಮಕರ ರಾಶಿ: ಶನಿ ತನ್ನದೇ ರಾಶಿಯಲ್ಲಿ ಬಲಾಢ್ಯನಾಗಿದ್ದು ಸ್ವಲ್ಪಮಟ್ಟಿಗೆ ಉತ್ತಮವಾಗಿ ಕಂಡರೂ ಗುರುಬಲವಿಲ್ಲದ ಕಾರಣ ಶುಭಕಾರ್ಯಗಳಲ್ಲಿ ಅಡೆತಡೆಯುಂಟಾಗುತ್ತದೆ. ಗುರುವಿನ ಪ್ರಾರ್ಥನೆ ಮಾಡಿಕೊಳ್ಳುವುದರಿಂದ ವಿಶೇಷ ಫಲಗಳು ಸಿಗುತ್ತವೆ.
ಕುಂಭ ರಾಶಿ: ಗುರುಬಲವಿಲ್ಲದ ಕಾರಣ ಶುಭಕಾರ್ಯಗಳು ನಡೆಯುವುದಿಲ್ಲ. ಎಲ್ಲಾ ಕಾರ್ಯಗಳಲ್ಲಿ ಅಡಚಣೆಯುಂಟಾಗುತ್ತದೆ. ಶನಿಯೂ 12ನೇ ಮನೆಯಲ್ಲಿರುವುದರಿಂದ ಮನಸ್ಸಿಗೆ ಬೇಸರವಾಗುವಂಥ ಸಂಗತಿಗಳು ನಡೆಯುವ ಸಾಧ್ಯತೆಯಿದೆ. ಗುರು ಮತ್ತು ಶನಿ ಶಾಂತಿ ಮಾಡಿಕೊಳ್ಳುವುದರಿಂದ ವಿಶೇಷ ಫಲಗಳು ಉಂಟಾಗುತ್ತವೆ.
ಮೀನ ರಾಶಿ: ಮದುವೆಯಾಗದಿದ್ದವರಿಗೆ ಹೊಸ ದಾರಿ ಕಾಣುವ ಸಾಧ್ಯತೆಯಿದೆ, ಪ್ರಯತ್ನಗಳು ಸಮಧಾನ ಕೊಡಲಿವೆ. ಚಂದ್ರ 8ನೇ ಮನೆಯಲ್ಲಿರುವುದರಿಂದ ಮನಸ್ಸಿಗೆ ಅಹಿತಕರವಾದ ಸಂಗತಿಗಳು ನಡೆಯಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಮಾನಸಿಕವಾಗಿ ಒತ್ತಡಗಳು ಹೆಚ್ಚಾಗಬಹುದು, ಎಲ್ಲವನ್ನೂ ಸಮಾಧಾನವಾಗಿ ಸ್ವೀಕರಿಸಿ ಮುಂದುವರೆದರೆ ಒಳ್ಳೆಯದು.

weekly horoscope from 11 october to 16 october zodiac signs jataka phala
ಇದನ್ನೂ ಓದಿ: ನವರಾತ್ರಿ ಸಂಭ್ರಮ: ಪ್ರತಿದಿನ ದೇವಿ ಪೂಜೆ ಹೀಗೆ ಮಾಡಿ, ಈ ಮಂತ್ರ ಜಪಿಸಿ
ಇದನ್ನೂ ಓದಿ: ಮಂಗಳ ಗ್ರಹದ ಅಂಗಳದಿ ಜಲದ ಸುಳಿವು
Discussion about this post