ಚಿಕ್ಕಮಗಳೂರು: ಒಳಚರಂಡಿ ಯೋಜನೆ ಮತ್ತು ಅಮೃತ್ ಯೋಜನೆ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಎಂಟು ದಿನಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಜಮೀಲ್ ಅಹಮದ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರನ್ನು ಗುರುವಾರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ಅವರು ನಗರದ ಒಳಚರಂಡಿ ಯೋಜನೆ ಮತ್ತು ಅಮೃತ್ ಯೋಜನೆ ಕಾಮಗಾರಿಯಲ್ಲಿ 204 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಆರೋಪಿಸಿದರು.
ಒಳಚರಂಡಿ ಯೋಜನೆ ಮತ್ತು ಅಮೃತ್ ಯೋಜನೆ ಕಾಮಗಾರಿಗಳಿಂದಾಗಿ ನಗರದ ಒಂದೂವರೆ ಲಕ್ಷ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದ ಜಮೀಲ್ ಅಹ್ಮದ್ ಹಗರಣದ ಬಗ್ಗೆ ಕೂಡಲೇ ಜಿಲ್ಲಾಡಳಿತ ತನಿಖೆ ನಡೆಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಎಂಟು ದಿನದೊಳಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಂಟು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು. ಕೋರ್ಟ್ ಕಮೀಷನರ್ ಅವರಿಂದ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಜಾತ್ಯಾತೀತ ಜನತಾದಳದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ ಹಾಜರಿದ್ದರು.
Discussion about this post