ಚಿಕ್ಕಮಗಳೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ 6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಎಂ.ಕೆ. ಪ್ರಾಣೇಶ್ ೧೧೮೮ ಮತಗಳನ್ನು ಪಡೆದುಕೊಂಡಿದ್ದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎ.ವಿ. ಗಾಯತ್ರಿ ಶಾಂತೇಗೌಡ ೧೧೮೨ ಮತಗಳನ್ನು ಪಡೆದುಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ. ಸುಂದರೇಗೌಡ ೧ ಮತಗಳನ್ನು ಪಡೆದುಕೊಂಡಿದ್ದರೆ, ಪಕ್ಷೇತರ ಅಭ್ಯರ್ಥಿ ಬಿ.ಟಿ. ಚಂದ್ರಶೇಖರ್ ಹಾಗೂ ಜಿ.ಐ. ರೇಣುಕುಮಾರ್ ಅವರಿಗೆ ಒಂದೂ ಮತ ಬಿದ್ದಿಲ್ಲ. ಇನ್ನು ೩೯ ಮತಗಳು ತಿರಸ್ಕೃತಗೊಂಡಿವೆ.
ಜಿಲ್ಲೆಯಲ್ಲಿ ೨೪೧೭ ಮತಗಳಿದ್ದು, ಈ ಪೈಕಿ ೨೪೧೦ ಮತಗಳು ಚಲಾವಣೆಯಾಗಿದ್ದವು. ಚುನಾವಣಾ ಪ್ರಕ್ರಿಯೆ ಆರಂಭದ ದಿನಗಳಲ್ಲಿ ಬಿಜೆಪಿ ಅಲೆ ಇತ್ತು. ಮತದಾನ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಬಗ್ಗೆ ಒಲವು ವ್ಯಕ್ತವಾಯಿತು. ಮತದಾನ ದಿನದಂದು ಬಿಜೆಪಿ ಅಲೆ ಬೀಸಿತು. ಇದರಿಂದ ಚುನಾವಣಾ -ಲಿತಾಂಶ ನಿಖರವಾಗಿ ಹೇಳಲು ಉಭಯ ಪಕ್ಷಗಳ ಮುಖಂಡರಿಗೆ, ಕಾರ್ಯಕರ್ತರಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ಕಷ್ಟವಾಗಿತ್ತು.
ಬಿಜೆಪಿ ೫೦೦ ಮತಗಳ ಅಂತರದಿಂದ ತನ್ನ ಗೆಲುವು ನಿರೀಕ್ಷೆ ಮಾಡಿತ್ತು. ಕಾಂಗ್ರೆಸ್ ೨೦೦ ಮತಗಳ ಅಂತರದಲ್ಲಿ ಜಯಗಳಿಸುವ ವಿಶ್ವಾಸ ಹೊಂದಿತ್ತು. ಆದರೆ, ಮತದಾರರು ಈ ಎರಡು ಪಕ್ಷಗಳ ಲೆಕ್ಕಚಾರವನ್ನು ಬುಡಮೇಲು ಮಾಡಿದ್ದಾರೆ. ೬ ಮತಗಳ ಅಂತರದಿಂದ ಗೆಲುವು ಕೊಟ್ಟಿದ್ದಾರೆ.
ಇಲ್ಲಿನ ಬೇಲೂರು ರಸ್ತೆಯಲ್ಲಿರುವ ಎಸ್‌ಟಿಜೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ಬೆಳಿಗ್ಗೆ ಎಣಿಕೆ ಆರಂಭವಾದ ಕ್ಷಣದಿಂದ ಕೊನೆಯವರೆಗೆ ಕುತೂಹಲ ಮೂಡಿತ್ತು. ಇದು, ಬರೀ ಅಭ್ಯರ್ಥಿಗಳಿಗೆ ಮಾತ್ರ ಅಲ್ಲ, ಎಣಿಕೆಯ ಏಜೆಂಟರಿಗೂ ಫಲಿತಾಂಶ ನಿಖರವಾಗಿ ಹೇಳಲು ಕಷ್ಟವಾಗಿತ್ತು.
ಮರು ಎಣಿಕೆಯ ಕೋರಿಕೆ ವಿಫಲ: ವಿಧಾನಪರಿಷತ್ ಮತ ಎಣಿಕೆ ಮುಗಿದು ೬ ಮತಗಳ ಅಂತರದಿಂದ ಪರಾಭವಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಎ.ವಿ. ಗಾಯತ್ರಿ ಶಾಂತೇಗೌಡ ಅವರು ಮರು ಎಣಿಕೆ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವಿಷಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಯಾವುದೇ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ಅದ್ದರಿಂದ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರು ಗಾಯತ್ರಿ ಶಾಂತೇಗೌಡ ಅವರು ಕೊಟ್ಟಿರುವ ಮನವಿ ಪತ್ರವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಟ್ಟರು.
ಜತೆಗೆ ಮತ ಎಣಿಕೆಯ ಮಾಹಿತಿಯನ್ನು ಸಹ ಆಯೋಗಕ್ಕೆ ಕಳುಹಿಸಿಕೊಡಲಾಯಿತು. ಆಯೋಗದಿಂದ ಲಿಖಿತವಾಗಿ ಉತ್ತಮ ಬರುವವರೆಗೆ ಜಿಲ್ಲಾಡಳಿತ ಮಾತ್ರವಲ್ಲ, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದಲ್ಲಿಯೇ ಇದ್ದರು.
ಮತ ಎಣಿಕೆ ಮಧ್ಯಾಹ್ನ ೧೨.೩೦ಕ್ಕೆ ಮುಗಿದು ಸ್ಪಷ್ಟವಾದ ಚಿತ್ರಣ ಸಿಕ್ಕಿದ್ದರೂ ಕೂಡ ಜಿಲ್ಲಾಡಳಿತ ಆಯೋಗದ ಅನುಮತಿ ಇಲ್ಲದೆ ಫಲಿತಾಂಶ ಪ್ರಕಟ ಮಾಡುತ್ತಿಲ್ಲ. ಅದರ ಜತೆಗೆ ಮರು ಮತ ಎಣಿಕೆ ಕೋರಿ ಮನವಿ ಪತ್ರ ಬಂದಿದ್ದರಿಂದ ಲಿಖಿತ ಉತ್ತರಕ್ಕಾಗಿ ಕಾಯಬೇಕಾಗಿತ್ತು.
ಇದರ ಜತೆಗೆ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಈ ಅರ್ಜಿ ಇತ್ಯರ್ಥ ಆಗದ ಹೊರತು ಫಲಿತಾಂಶ ಪ್ರಕಟಿಸಬಾರದೆಂದು ಕೋರಿಕೊಂಡರು. ಮಧ್ಯಾಹ್ನ ೩ ಗಂಟೆಯ ವೇಳೆಗೆ ಆಯೋಗವು ಚುನಾವಣಾ ಫಲಿತಾಂಶ ಪ್ರಕಟ ಮಾಡುವಂತೆ ಆದೇಶ ನೀಡಿದ ಮೇರೆಗೆ ಜಿಲ್ಲಾಽಕಾರಿ ರಮೇಶ್ ಅವರು ಫಲಿತಾಂಶ ಪ್ರಕಟಿಸಿ ಜಯಗಳಿಸಿದ ಎಂ.ಕೆ. ಪ್ರಾಣೇಶ್ ಅವರಿಗೆ ಪ್ರಮಾಣಪತ್ರವನ್ನು ವಿತರಿಸಿದರು.
Hard-fought win of the gap
Discussion about this post