Chanakya Neeti: ಕೆಲ ಜಾಗಗಳು ಎಷ್ಟೇ ಸುಂದರವಾಗಿದ್ದರೂ ಅವು ಉಳಿಯಲು ಯೋಗ್ಯವಾಗಿರುವುದಿಲ್ಲ. ಅಂಥ ಜಾಗದಲ್ಲಿ ಉಳಿದುಕೊಳ್ಳಲೇಬಾರದು ಅಂತಾ ಚಾಣಕ್ಯರು ಹೇಳುತ್ತಾರೆ. ಹಾಗಾದ್ರೆ ಎಂಥ ಜಾಗದಲ್ಲಿ ನಾವು ಉಳಿದುಕೊಳ್ಳಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಯಾವ ಜಾಗದಲ್ಲಿ ಗೌರವ ಸಿಗುವುದಿಲ್ಲವೋ, ಯಾವ ಜಾಗದಲ್ಲಿ ವಿದ್ಯಾಭ್ಯಾಸ ಮಾಡಲು ಅನುಕೂಲವಿರುವುದಿಲ್ಲವೋ, ಯಾವ ಜಾಗದಲ್ಲಿ ಉತ್ತಮ ಉದ್ಯೋಗ ಮಾಡಲು ಅವಕಾಶವಿರುವುದಿಲ್ಲವೋ, ಯಾವ ಜಾಗದಲ್ಲಿ ಬಂಧುಗಳು ಪ್ರೀತಿಯಿಂದ ಕಾಣುವುದಿಲ್ಲವೋ ಅಂಥ ಜಾಗ ವಾಸಿಸಲು ಯೋಗ್ಯವಾದುದಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.
ಅದೇ ರೀತಿ ಯಾವ ದೇಶದಲ್ಲಿ ವೇದ ವಿದ್ಯಾಪಾರಂಗತನಾದ ಬ್ರಾಹ್ಮಣ, ಶ್ರೀಮಂತ ಜನ, ಉತ್ತಮನಾದ ರಾಜ, ಜಲಪೂರ್ಣವಾದ ನದಿ ಮತ್ತು ವೈದ್ಯಕೀಯ ಸೌಲಭ್ಯದ ಜೊತೆ ಉತ್ತಮ ವೈದ್ಯ ಇರುವುದಿಲ್ಲವೋ, ಅಂಥ ದೇಶ ವಾಸಿಸುವುದಕ್ಕೆ ಯೋಗ್ಯವಲ್ಲವೆಂದು ಚಾಣಕ್ಯರು ಹೇಳಿದ್ದಾರೆ.
1.ಮೊದಲನೇಯದಾಗಿ ಮನುಷ್ಯ ತನಗೆ ಯಾವ ಜಾಗದಲ್ಲಿ ಗೌರವ ಸಿಗುವುದಿಲ್ಲವೋ ಅಂಥ ಜಾಗದಲ್ಲಿ ಇರಕೂಡದು. ಅದು ಎಷ್ಟೇ ಸುಂದರಾದ ಜಾಗವಾಗಿರಲಿ, ಅಲ್ಲಿ ಸಕಲ ಸೌಲಭ್ಯಗಳಿರಲಿ, ಭಕ್ಷ್ಯ ಭೋಜನಗಳಿರಲಿ, ಎಲ್ಲವೂ ಇದ್ದು, ನಿಮಗೆ ಗೌರವವಿಲ್ಲದಿದ್ದಲ್ಲಿ ಆ ಜಾಗದಲ್ಲಿ ನೀವು ಇರಕೂಡದು ಅಂತಾ ಚಾಣಕ್ಯರು ಹೇಳುತ್ತಾರೆ.
2. ಇನ್ನು ಯಾವ ಜಾಗದಲ್ಲಿ ವಿದ್ಯಾಭ್ಯಾಸ ಮಾಡಲು, ಉದ್ಯೋಗ ಮಾಡಲು ಅನುಕೂಲವಿರುವುದಿಲ್ಲವೋ ಆ ಜಾಗ ಕೂಡ ವಾಸವಾಗಿರಲು ಯೋಗ್ಯವಲ್ಲ. ಉದ್ಯೋಗಂ ಪುರುಷ ಲಕ್ಷಣಂ ಅನ್ನೋ ಮಾತು ಹಳೆಯದಾಯ್ತು. ಯಾಕಂದ್ರೆ ಈಗ ಹೆಣ್ಣು ಕೂಡ ಗಂಡಿಗೆ ಸರಿಸಮಳಾಗಿ ದುಡಿಯುತ್ತಾಳೆ. ಅದೇ ರೀತಿ ಒಬ್ಬ ಮನುಷ್ಯನಿಗೆ ಉದ್ಯೋಗವೆಂಬುದು ತುಂಬಾ ಮುಖ್ಯ. ಉದ್ಯೋಗವಿಲ್ಲದವರನ್ನ ಯಾರೂ ಗೌರವಿಸುವುದಿಲ್ಲ. ಹಾಗಾಗಿ ಓರ್ವ ಮನುಷ್ಯನಿಗೆ ಉತ್ತಮ ಉದ್ಯೋಗವಿರಬೇಕು. ಅವನು ವಿದ್ಯಾವಂತನಾಗಿರಬೇಕು. ಆವಾಗಲೇ ಅವನಿಗೆ ಗೌರವ ಸಿಗುತ್ತದೆ. ಆದ್ರೆ ವಿದ್ಯೆ ಕಲಿಯಲು, ಉದ್ಯೋಗ ಮಾಡಲು ಅನುಕೂಲವಿಲ್ಲದಿರುವ ಜಾಗ ವಾಸಿಸಲು ಯೋಗ್ಯವಾಗಿರುವುದಿಲ್ಲ.
3. ಇನ್ನು ಯಾವ ಜಾಗದಲ್ಲಿ ಬಂಧುಗಳು ಪ್ರೀತಿಯಿಂದ ಕಾಣುವುದಿಲ್ಲವೋ, ಅಂಥ ಜಾಗ ಕೂಡ ವಾಸಿಸಲು ಯೋಗ್ಯವಲ್ಲ ಅಂತಾ ಹೇಳಲಾಗುತ್ತದೆ. ಉದಾಹರಣೆಗೆ ಓರ್ವ ಶ್ರೀಮಂತ ಮನುಷ್ಯನಿರುತ್ತಾನೆ. ಅವನಿಗೆ ಸುಂದರವಾದ ಪತ್ನಿ ಇರುತ್ತಾಳೆ. ಉತ್ತಮ ವಿದ್ಯಾಭ್ಯಾಸವುಳ್ಳ, ಉದ್ಯೋಗ ಉಳ್ಳ ಮಕ್ಕಳಿರುತ್ತಾರೆ. ಐಶಾರಾಮಿ ಜೀವನ ಅವನದ್ದಾಗಿರುತ್ತದೆ. ಆದ್ರೆ ಅವನಿಗೆ ಆ ಮನೆಯ ಜನರ್ಯಾರೂ ಪ್ರೀತಿಯೇ ತೋರಿಸುವುದಿಲ್ಲ. ಯಾವಾಗಲೂ ಅವನನ್ನು ಸಿಟ್ಟಿನಿಂದಲೇ ಮಾತನಾಡಿಸುತ್ತಾರೆ. ಬೈಯ್ಯುತ್ತಲೇ ಇರುತ್ತಾರೆ. ಗೌರವ ನೀಡುವುದೇ ಇಲ್ಲ. ಅಂಥವನಿಗೆ ಎಷ್ಟು ಶ್ರೀಮಂತಿಕೆ, ಐಶಾರಾಮಿ ಜೀವನ ಇದ್ದರೇನು ಪ್ರಯೋಜನ..? ಆದ್ದರಿಂದಲೇ ಯಾವ ಜಾಗದಲ್ಲಿ ಬಂಧುಗಳು ಪ್ರೀತಿಯಿಂದ ಕಾಣುವುದಿಲ್ಲವೋ, ಅಂಥ ಜಾಗ ಕೂಡ ವಾಸಿಸಲು ಯೋಗ್ಯವಲ್ಲ ಅಂತಾ ಚಾಣಕ್ಯರು ಹೇಳಿದ್ದಾರೆ.
4. ಇದೇ ರೀತಿ ಒಂದು ದೇಶದಲ್ಲಿ ವೇದವಿದ್ಯಾಪಾರಂಗತನಾದ ಬ್ರಾಹ್ಮಣನಿರಬೇಕು. ಆ ಬ್ರಾಹ್ಮಣ ಸಕಲರಿಗೂ ವಿದ್ಯೆ ನೀಡಿ, ವಿದ್ಯಾವಂತರನ್ನಾಗಿ ಮಾಡುತ್ತಾನೆ. ಆಗ ಆ ದೇಶದಲ್ಲಿ ಧರ್ಮದ ರಕ್ಷಣೆಯಾಗುತ್ತದೆ. ಅಧರ್ಮಿಗಳು ಇರುವುದಿಲ್ಲ. ಆ ದೇಶದಲ್ಲಿ ಶ್ರೀಮಂತನೂ ಇರಬೇಕು. ಅವನಿಂದ ದೇಶದಲ್ಲಿ ವ್ಯವಸಾಯ, ವಾಣಿಜ್ಯ ಅಭಿವೃದ್ಧಿಗೊಂಡು ದೇಶ ಉನ್ನತಿಯ ಪಥದತ್ತ ಸಾಗುತ್ತದೆ. ಇನ್ನು ಉತ್ತಮ ರಾಜನಿರುವ ದೇಶ, ಸುಭಿಕ್ಷ ದೇಶವಾಗಿರುತ್ತದೆ. ಅವನ ಆಡಳಿತ ಉತ್ತಮವಾಗಿದ್ದು, ಆ ದೇಶದ ಪ್ರಜೆಗಳು ಸಂತಸದಿಂದಿರುತ್ತಾರೆ.
5. ಇದೇ ರೀತಿ ಒಂದು ದೇಶದಲ್ಲಿ ನದಿ ಮತ್ತು ಉತ್ತಮ ವೈದ್ಯ, ವೈದ್ಯಕೀಯ ಸೌಲಭ್ಯವಿರುವುದು ಕೂಡಾ ತುಂಬಾ ಮುಖ್ಯ. ನದಿ ಇರುವ ಜಾಗ ಸಮೃದ್ಧವಾಗಿರುತ್ತದೆ. ಮತ್ತು ಉತ್ತಮ ವೈದ್ಯ, ವೈದ್ಯಕೀಯ ಸೌಲಭ್ಯವಿರುವ ಜಾಗದಲ್ಲಿ ಜನ ಚಿಕಿತ್ಸೆಗಾಗಿ ಪರದಾಡುವ ಅವಶ್ಯಕತೆ ಇರುವುದಿಲ್ಲ. ನದಿ ಮತ್ತು ಚಿಕಿತ್ಸೆ ಎರಡೂ ಕೂಡ ಮನುಷ್ಯನ ಜೀವನಕ್ಕೆ ಬೇಕಾದ ಪ್ರಮುಖ ಸೌಲಭ್ಯಗಳಾಗಿದೆ. ಹಾಗಾಗಿ ಈ ಮೊದಲು ಹೇಳಿದ ಎಲ್ಲಾ ಸೌಲಭ್ಯಗಳು ಒಂದು ದೇಶದಲ್ಲಿರಬೇಕು. ಇಲ್ಲವಾದಲ್ಲಿ ಅಂಥ ದೇಶ ವಾಸಿಸಲು ಯೋಗ್ಯವಲ್ಲದ ದೇಶವಾಗಿರುತ್ತದೆ ಅಂತಾ ಚಾಣಕ್ಯರು ಹೇಳಿದ್ದಾರೆ.
ಈ ಜನಾಂಗದವರು ತಮ್ಮವರು ಯಾರಾದರೂ ಮರಣ ಹೊಂದಿದರೆ ಖುಷಿಯಾಗಿ ನೃತ್ಯ ಮಾಡುತ್ತಾರೆ
ಚಾಣಕ್ಯರ ಜಾತಕ ನೋಡಿ ಜ್ಯೋತಿಷಿಗಳು ಹೇಳಿದ್ದೇನು? ಹಲ್ಲು ಮುರಿದುಕೊಂಡು ಭವಿಷ್ಯ ಬದಲಿಸಿಕೊಂಡ ಕೌಟಿಲ್ಯ
ಸಾಮಾನ್ಯ ಯುವಕನನ್ನು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡಿದ ಚಾಣಕ್ಯರ ಚಾಣಾಕ್ಷತನದ ರೋಚಕ ಕಥೆ
Discussion about this post