ಚಿಕ್ಕಮಗಳೂರು: ನವೆಂಬರ್ ೧ ರಂದು ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವನ್ನು ಸರ್ಕಾರದ ನಿರ್ದೇಶನದಂತೆ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೆಶ್ ಹೇಳಿದರು.
ಕನ್ನಡ ರಾಜ್ಯೋತ್ಸವ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಂಭಾಣಗಣದಲ್ಲಿ ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ೧೯೫೬ ರಲ್ಲಿ ಮೈಸೂರು ರಾಜ್ಯ ಉದಯವಾಯಿತು, ನಂತರ ೧೯೭೩ ರ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.
ನವೆಂಬರ್ ೧ ರಂದು ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಬೆಳಿಗ್ಗೆ ೮.೪೫ ಗಂಟೆಗೆ ಭುವನೇಶ್ವರಿ ದೇವಿಗೆ ಗಣ್ಯರಿಂದ ಪುಪ್ಪಾರ್ಚನೆ ಮಾಡಿದ ನಂತರ ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ ಎಂದ ಅವರು ಸುಗಮ ಕಾರ್ಯಕ್ರಮ ನಡೆಯಲು ವಿವಿಧ ಸಮಿತಿಗಳನ್ನು ರಚಿಸಿ, ಸಮಿತಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದರು.
ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸಲು ನಿರ್ದೇಶನ ನೀಡಲಾಗುವುದು ಎಂದರಲ್ಲದೆ ಎಲ್ಲಾ ಸರ್ಕಾರಿ ಕಛೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವಂತೆ ಹೇಳಿದರು.
ಕನ್ನಡ ರಾಜ್ಯೋತ್ಸವ ದಿನದಂದು ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗುವಂತೆ ತಿಳಿಸಿದ ಅವರು ಗೈರು ಹಾಜರಾಗುವ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು, ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಧಿಕಾರಿ ಡಾ. ಹೆಚ್, ಎಲ್ ನಾಗರಾಜು ಸೇರಿದಂತೆ ಕನ್ನಡ ಪರ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಜರಿದ್ದರು.
Discussion about this post