ಚಿಕ್ಕಮಗಳೂರು: ‘ಬುದ್ದಿವಂತರ ಸದನ ‘ಎಂದೇ ಕರೆಯಲ್ಪಡುವ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ದಿನಾಂಕ ನಿಗಧಿಯಾಗಿದ್ದು ರಾಜ್ಯದ ಮೂರು ಪಕ್ಷಗಳಿಗೆ ಇದು ಪ್ರತಿಷ್ಟೆಯಾಗಿ ಮಾರ್ಪಟ್ಟಿದೆ. ಇತ್ತ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್‍ನಿಂದ ಪರಿಷತ್ ಚುನಾವಣಾ ಅಖಾಡಕ್ಕೆ ಯಾರು ಇಳಿಯಲಿದ್ದಾರೆ ಎಂಬ ಕುತೂಹಲ ಮನೆ ಮಾಡಿತ್ತು. ಇದೀಗ ಅಭ್ಯರ್ಥಿಯ ಆಯ್ಕೆ ಬಹುತೇಕ ಖಚಿತವಾಗಿದೆ.
ಡಿಸೆಂಬರ್ 10 ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಬೆಂಗಳೂರಿನ ಗಾಲ್ಫ ಕ್ಲಬ್‍ನಲ್ಲಿ ಪಕ್ಷದ ರಾಜ್ಯ ಪ್ರಮುಖ ವರಿಷ್ಟರೊಂದಿಗೆ ಮಾಜಿ ಸಚಿವ ಕೆ.ಜೆ. ಜಾರ್ಜ್, ಬಿ.ಎಲ್. ಶಂಕರ್ ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರುಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಫೈನಲ್ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ.
ಪಕ್ಷದಿಂದ ಡಾ. ಡಿ. ಎಲ್. ವಿಜಯ್‍ಕುಮಾರ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ನಾಯಕರ ತೀರ್ಮಾನದಂತೆ ಗಾಯತ್ರಿ ಅವರನ್ನು ಅಂತಿಮಗೊಳಿಸಲಾಗಿದೆ.
ಈ ಬಾರಿ ವಿಧಾನ ಪರಿಷತ್ ಚುನಾವಣೆ ಜಿದ್ದಾಜಿದ್ದಿನ ಸಮರವಾಗಿದ್ದು, ರಾಜ್ಯದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ಚುನಾವಣೆಯನ್ನು ಪ್ರತಿಷ್ಟೆಯನ್ನಾಗಿ ಸ್ವೀಕರಿಸಿದ್ದು ಸಮರ್ಥ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಸರತ್ತು ನಡೆಸುತ್ತಿವೆ. ಇದೀಗ ಜಿಲ್ಲೆಯಲ್ಲಿ ಕಾಂಗ್ರೆಸ್‍ನಿಂದ ಅಭ್ಯರ್ಥಿಯ ಹೆಸರನ್ನು ರಾಜ್ಯ ನಾಯಕರು ಅಂತಿಮಗೊಳಿಸಿದ್ದಾರೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆಯ ದಿನವಾಗಿದ್ದು. ಡಿಸೆಂಬರ್ 10ರಂದು ಮತದಾನ, ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ:
Legislative Council: ಕರ್ನಾಟಕ ವಿಧಾನ ಪರಿಷತ್ಗೆ ದ್ವೈವಾರ್ಷಿಕ ಚುನಾವಣೆ ದಿನಾಂಕ ಪ್ರಕಟ
Discussion about this post