ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ನಡೆದವು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಜಯದಶಮಿ ದಿನವಾದ ಶುಕ್ರವಾರ ಬೆಳಿಗ್ಗೆ ಬನ್ನಿ ಪೂಜೆ ಸಲ್ಲಿಸಿದರು.
ಸುಮಾರು 20 ನಿಮಿಷಗಳು ಪೂಜಾ ಕೈಂಕರ್ಯಗಳು ನಡೆದವು. ಪಟ್ಟದ ಕತ್ತಿ ಸಮೇತ ಆಗಮಿಸಿದ ಯದುವೀರ್, ಬನ್ನಿ ಪೂಜೆ ಮೂಲಕ ವಿಜಯಯಾತ್ರೆ ಮುಗಿಸಿದರು. ಹಿರಿಯ ಪುರೋಹಿತರ ಮಾರ್ಗದರ್ಶನದಲ್ಲಿ ಪೂಜಾಕಾರ್ಯ ನಡೆಯಿತು.
ವಿಜಯಯಾತ್ರೆ ಮುಕ್ತಾಯದೊಂದಿಗೆ ಖಾಸಗಿ ದರ್ಬಾರ್ ಕೊನೆಗೊಂಡಿತು. ಯದುವೀರ್ ಅವರು ಕಂಕಣ ವಿಸರ್ಜನೆ ಮಾಡಿದರು. ನಂತರ ವಿಜಯಯಾತ್ರೆ ಮೆರವಣಿಗೆ ನಡೆಸಿದರು. ತ್ರಿಷಿಕಾ ಯದುವೀರ್, ಆದ್ಯವೀರ್ ವೀಕ್ಷಣಾ ಗ್ಯಾಲರಿಯಲ್ಲಿ ಮೆರವಣಿಗೆ ವೀಕ್ಷಿಸಿದರು.
ಇತ್ತ ಚಾಮುಂಡಿಬೆಟ್ಟದಿಂದ ಅರಮನೆಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ಇಂದು ಸಂಜೆ ಅರಮನೆಯಲ್ಲಿ ಜಂಬೂಸವಾರಿ ನಡೆಯಲಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ. ಮಧ್ಯಾಹ್ನಚಿನ್ನದ ಅಂಬಾರಿ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು.
ಸತತ ಎರಡನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ಸಿದ್ಧನಾಗಿದ್ದಾನೆ. ಅಭಿಮನ್ಯುವಿನ ಎಡಬಲದಲ್ಲಿ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ಚೈತ್ರಾ ಸಾಗಲಿದ್ದಾರೆ.
Discussion about this post