ಚಿಕ್ಕಮಗಳೂರು: ಜಿಲ್ಲೆಯಲ್ಲಿ ನ.8 ರಿಂದ 14ವರೆಗೆ ದತ್ತಮಾಲೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರಕುಲಕರ್ಣಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ, ನಗರದ ಶಂಕರಮಠದಲ್ಲಿ ನ.೮ರಂದು ಬೆಳಿಗ್ಗೆ ೧೦ ಗಂಟೆಗೆ ದತ್ತಭಕ್ತರು ದತ್ತಮಾಲೆಧರಿಸಲಿದ್ದಾರೆ,ದತ್ತಾತ್ರೇಯರ ಭಾವಚಿತ್ರವನ್ನಿಟ್ಟು ರಾಜ್ಯಾದ್ಯಂತ ನ.೧೧ ರಂದು ಸಂಜೆ ೭ ಗಂಟೆಗೆ ದೇವಾಲಯಗಳಲ್ಲಿ ದತ್ತದೀಪೋತ್ಸವ ಆಚರಿಸಲಾಗುತ್ತಿದ್ದು, ೧೨ ರಂದು ಪಡಿಸಂಗ್ರಹಿಸಿ ೧೪ ರಂದು ದತ್ತಮಾಲಾಧಾರಿಗಳು ಶಂಕರಮಠದಿಂದ ಇರುಮುಡಿಹೊತ್ತು ದತ್ತಪೀಠಕ್ಕೆ ತೆರಳಲಿದ್ದಾರೆ ಎಂದರು.
ಅಂದು ದತ್ತಪೀಠದಲ್ಲಿ ಹೋಮ,ಹವನ ಜರುಗುತ್ತಿದ್ದು, ಧರ್ಮಸಭೆ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ರಾಜ್ಯದಿಂದ ವಿವಿಧ ಮಠಗಳಿಂದ ಸ್ವಾಮೀಜಿಗಳ ಆಗುಮಿಸುವ ಮೂಲಕ ಪಾದುಕೆಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ದತ್ತವಿಗ್ರಹ ಸಿಗುವ ತನಕ ಶೋಭಾಯಾತ್ರೆ ಮಾಡದಿರಲು ಶ್ರೀರಾಮಸೇನೆ ನಿರ್ಧರಿಸಿದ್ದು, ಅದರಂತೆ ಈವರ್ಷ ನಗರದಲ್ಲಿ ಶೋಭಾಯಾತ್ರೆ ನಡೆಯುವುದಿಲ್ಲವೆಂದು ಹೇಳಿದರು.
ಇತ್ತೀಚೆಗೆ ದತ್ತಪೀಠಕ್ಕೆ ತೆರಳಿದ್ದ ಸಂದರ್ಭದಲ್ಲಿ ಸ್ವಾಮೀಜಿಗಳಿಗೆ ಗುಹೆಯೊಳಗೆ ಪ್ರವೇಶಿಸಲು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ, ರಾಜ್ಯಕ್ಕೆ ಸ್ಪಷ್ಟ ಸಂದೇಶ ರವಾನಿಸುವ ನಿಟ್ಟಿನಲ್ಲಿ ಶೋಭಾಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.ದತ್ತಮಾಲಾಕಾರ್ಯಕ್ರಮಕ್ಕೆ ಯಾವ ಸ್ವಾಮೀಜಿಗಳು ಆಗಮಿಸುತ್ತಾರೆಂಬ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗದು ಆದರೆ ದತ್ತಮಾಲಾ ಅಭಿಯಾನ ಕುರಿತು ಮಾಹಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದನೆ ನೀಡದಿದ್ದರೆ, ಕಾರ್ಯಕ್ರಮವನ್ನು ಬೇರೆದಿಕ್ಕಿಗೆ ತಿರುಗುತ್ತದೆ ಎಂದು ಎಚ್ಚರಿಸಿದ ಅವರು, ದತ್ತಪೀಠಕ್ಕೆ ಹಿಂದು ಅರ್ಚಕರ ನೇಮಿಸುವ ವಿಷಯಕ್ಕೆ ಸಂಬಂಧಿಸಿದಂತೆ ಅ.೨೪-೨೫ ರಂದು ಮುಜರಾಯಿ ಸಚಿವೆ ಶಶಿಕಲಾಜೊಲ್ಲೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ನ್ಯಾಯಾಮೂರ್ತಿ ನಾಗಮೋಹನ್‌ದಾಸ್ ನೇತೃತ್ವ ಸಮಿತಿ ವರದಿಯನ್ನು ಹೈಕೋರ್ಟ್ ತಿರಸ್ಕರಿಸಿರುವುದರಿಂದ ರಾಜ್ಯ ಸರ್ಕಾರ ಮತ್ತೊಂದು ಸಮಿತಿ ರಚಿಸಿರುವುದರಲ್ಲಿ ಅರ್ಥವಿಲ್ಲ, ಇದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಸಂಘಟನೆಗೆ ಪಕ್ಷ ಮುಖ್ಯವಲ್ಲ, ಹಿಂದುತ್ವ ಮುಖ್ಯವಾಗಿದೆ ಎಂದರು.
ಶ್ರೀರಾಮಸೇನೆ ರಾಜ್ಯಪ್ರಧಾನಕಾರ್ಯದರ್ಶಿ ಆನಂದಶೆಟ್ಟಿ ಅಡ್ಯಾರ್,ಜಿಲ್ಲಾಧ್ಯಕ್ಷ ರಂಜಿತ್‌ಶೆಟ್ಟಿ,ದುರ್ಗಾಸೇನೆಯ ಜಿಲ್ಲಾಧ್ಯಕ್ಷ ಶಾರದಮ್ಮ, ತಾಲೂಕು ಅಧ್ಯಕ್ಷ ಪುನಿತ್, ತಾಲೂಕು ಪ್ರಮುಖ್ ಜ್ಞಾನೇಂದ್ರ,ಶೃಂಗೇರಿ ವಿಭಾಗ ಪ್ರಮುಖ್ ಅರ್ಜುನ್ ಇದ್ದರು.
Discussion about this post