ಬೆಳಗಾವಿ: ಕೋವಿಡ್-19 ಹಾಗೂ ರೂಪಾಂತರ ತಳಿ ಒಮಿಕ್ರಾನ್ ಸೋಂಕು ನಿಧಾನಕ್ಕೆ ಎಲ್ಲೆಡೆ ವ್ಯಾಪಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಹೊಸ ವರ್ಷಾಚರಣೆಗೆ ಗುಂಪು ಸೇರುವುದನ್ನು ಸರಕಾರ ನಿರ್ಬಂಧಿಸಲು ತೀರ್ಮಾನಿಸಿದೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಡಿ. 30ರಿಂದ ಜನವರಿ 2ರವರೆಗೆ ನಿಷೇಧ ವಿಧಿಸಲಾಗಿದೆ.
ಮಂಗಳವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರು, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಉನ್ನತಾಧಿಕಾರಿಗಳು ಹಾಗೂ ತಜ್ಞ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ, ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈಗಿರುವಂತಹ ಕೋವಿಡ್-19 ಮತ್ತು ಒಮಿಕ್ರಾನ್ ವೈರಸ್ ಸೋಂಕಿನ ಪರಿಸ್ಥಿತಿಯನ್ನು ಗಮನಿಸಿ, ಮಾಸ್ ಆಗಿ ಸಾರ್ವಜನಿಕರು ಸೇರುವುದನ್ನು ನಿರ್ಬಂಧಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್ ಮೊದಲಾದ ಕಡೆಗಳಲ್ಲಿ ಹಾಗೂ ರಾಜ್ಯದ ಎಲ್ಲ ಕಡೆಗಳಲ್ಲಿ ಬಹಿರಂಗವಾಗಿ ಸಾರ್ವಜನಿಕರು ಜಮಾಯಿಸುವುದನ್ನು ನಿರ್ಬಂಧ ಮಾಡಲಾಗುತ್ತದೆ. ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಡಿಜೆ ಇತ್ಯಾದಿ ಬಳಸಿ ಪಾರ್ಟಿ, ವಿಶೇಷ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಅದರ ಸಾಮರ್ಥ್ಯದ ಶೇ. 50ರಷ್ಟು ಮಂದಿಯನ್ನು ಅನುಮತಿಸಲಾಗುತ್ತದೆ. ಅಪಾರ್ಟ್‌ಮೆಂಟ್‌ಗಳಲ್ಲಿಯೂ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದರು.
ಡಿ. 24 ರಾತ್ರಿ ಮತ್ತು 25ರಂದು ಕ್ರಿಸ್ಮಸ್ ಆಚರಣೆಗೆ ಸಮಸ್ಯೆ ಇಲ್ಲ. ಕ್ರಿಸ್ಮಸ್ ಆಚರಣೆಯನ್ನು ಚರ್ಚ್‌ಗಳ ಒಳಗೆ ನಡೆಸಲಾಗುತ್ತದೆ. ಆಚರಣೆ ವೇಳೆ ಸುರಕ್ಷಿತ ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದ ಸಿಎಂ ಬಸವರಾಜ ಬೊಮ್ಮಾಯಿ, ಕ್ಲಬ್‌ಗಳಿಗೆ ಹೋಗುವವರು ಕಡ್ಡಾಯವಾಗಿ ಕೋವಿಡ್ ಲಸಿಕೆಯ ಎರಡು ಡೋಸ್‌ಗಳನ್ನೂ ತೆಗೆದುಕೊಂಡಿರಬೇಕು. ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ವಿವರಿಸಿದರು
Restriction on public events
Discussion about this post