ಬೆಂಗಳೂರು: ಸದ್ಯದಲ್ಲೇ ಕರ್ನಾಟಕವು ಸರ್ಕಾರದ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳ ಸಂಪೂರ್ಣ ವಿವರಗಳನ್ನೊಳಗೊಂಡ ಮೊಬೈಲ್ ಆಪ್ ಹೊಂದಲಿದ್ದು ತಮಿಳುನಾಡು ಮತ್ತು ಪುದುಚೆರಿ ರಾಜ್ಯಗಳ ನಂತರ ಈ ಸೌಲಭ್ಯ ಹೊಂದಲಿರುವ 3ನೇ ರಾಜ್ಯವಾಗಲಿದೆ.
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯು ಈ ಮೊಬೈಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದ್ದು ಇದು ಎಲ್ಲಾ ಮುಜರಾಯಿ ದೇವಸ್ಥಾನಗಳ ಇತಿಹಾಸ, ಆಚರಣೆಗಳು, ಸೇವಾದರಗಳು, ಮತ್ತು ಕ್ಷೇತ್ರವನ್ನು ತಲುಪಲು ಮಾರ್ಗಸೂಚಿ ಸೇರಿದಂತೆ ಎಲ್ಲಾ ವಿವರಗಳನ್ನೊಳಗೊಂಡಿರುತ್ತದೆ. ಇನ್‌ಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಮ್ಎಸ್) ಎಂದು ಇದನ್ನು ಹೆಸರಿಸಲಾಗಿದೆ.
ರಾಜ್ಯದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಈ ವಿಷಯವನ್ನು ತಿಳಿಸಿ ರಾಜ್ಯದ 34,559 ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಸೇರಿದ್ದು ಇವಗಳಲ್ಲಿ ಬಹಳಷ್ಟು ದೇವಸ್ಥಾನಗಳ ಇತಿಹಾಸ ಮತ್ತಿತರ ಮಾಹಿತಿಗಳು ಅಂತರ್‌ಜಾಲದಲ್ಲಿ ಲಭ್ಯವಿದ್ದು ಎಲ್ಲಾ ದೇವಸ್ಥಾನಗಳ ಸಂಪೂರ್ಣ ಮಾಹಿತಿಗಳನ್ನು ಒಗ್ಗೂಡಿಸಿ ಐಟಿಎಮ್ಎಸ್ ಆಪ್‌ನಲ್ಲಿ ನೀಡಲಾಗುವುದೆಂದು ತಿಳಿಸಿದರು. ನವೆಂಬರ್ 2021ರಲ್ಲಿ ಕಾರ್ಯಾರಂಭ ಮಾಡಲಿರುವ ಈ ಆಪ್‌ನಲ್ಲಿ ದೇವಸ್ಥಾನಗಳ ಸಂಪೂರ್ಣ ಆಸ್ತಿಗಳ ವಿವರವನ್ನೂ ನೀಡಲಾಗುತ್ತದೆ.
ಈ ಆಪ್ ಅತಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದು ಮೊದಲ ಹಂತದಲ್ಲಿ ಸುಮಾರು 207 “ಎ” ಗುಂಪಿನಲ್ಲಿ ಬರುವ ದೇವಸ್ಥಾನಗಳ ವಿವರಗಳನ್ನೊಳಗೊಂಡಿರುತ್ತದೆ ಎಂದು ಸಚಿವರು ತಿಳಿಸಿದರು. ಮುಂದುವರೆದು ಮಾತನಾಡಿದ ಸಚಿವರು ಆಯ್ದ ಮುಜರಾಯಿ ದೇವಸ್ಥಾನಗಳ ಅರ್ಚಕರು ಮತ್ತು ಸಿಬ್ಬಂದಿವರ್ಗದ ವೇತನವನ್ನು 6ನೇ ಪೇ ಕಮಿಷನ್ ಶಿಫಾರಸ್ಸಿನಂತೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದೂ ತಿಳಿಸಿದರು.
ರಾಜ್ಯದ ಒಟ್ಟು 34,563 ದೇವಾಲಯಗಳನ್ನು ಅವುಗಳ ವಾರ್ಷಿಕ ಆದಾಯದ ಪ್ರಕಾರ ಎ, ಬಿ, ಮತ್ತು ಸಿ ಗ್ರೇಡ್ ದೇವಸ್ಥಾನಗಳೆಂದು ಗುರುತಿಸಿದ್ದು ವಾರ್ಷಿಕ 25 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಬರುವ 207 ದೇವಸ್ಥಾನಗಳನ್ನು ಎ ವಿಭಾಗದಲ್ಲೂ, ವಾರ್ಷಿಕ 5 ಲಕ್ಷ ರೂಪಾಯಿಗಳಿಂದ 25 ಲಕ್ಷ ರೂಪಾಯಿಯೊಳಗಿನ ಆದಾಯದ 139 ದೇವಸ್ಥಾನಗಳನ್ನು “ಬಿ” ಗ್ರೇಡ್ ದೇವಸ್ಥಾನಗಳೆಂದೂ, ಮತ್ತು ವಾರ್ಷಿಕ 5 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಆದಾಯವಿರುವ 34,217 ದೇವಸ್ಥಾನಗಳನ್ನು “ಸಿ” ಗ್ರೇಡ್ ದೇವಸ್ಥಾನಗಳೆಂದು ವಿಂಗಡಿಸಲಾಗಿದೆ ಎಂದರು.
ಸದ್ಯ 1034 ಅರ್ಚಕರು ಮತ್ತು ಸಿಬ್ಬಂದಿ 5ನೇ ಪೇ ಕಮಿಷನ್ ಪ್ರಕಾರ ವೇತನ ಪಡೆಯುತ್ತಿದ್ದು ಇನ್ನು ಮುಂದೆ “ಎ” ಮತ್ತು “ಬಿ” ಗುಂಪಿನ ದೇವಸ್ಥಾನಗಳಿಂದ ಬರುವ ಆದಾಯದ 35% ಆದಾಯವನ್ನು ಇದಕ್ಕಾಗಿ ಉಪಯೋಗಿಸಿಕೊಳ್ಳಲಿರುವುದರಿಂದ 6ನೇ ಪೇ ಕಮಿಷನ್ ಪ್ರಕಾರ ವೇತನ ನೀಡುವುದು ಸರಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯೇನೂ ಆಗುವುದಿಲ್ಲ ಎಂದರು. ಈ ಹೊಸ ವೇತನ ಪರಿಷ್ಕರಣೆಯು ಉತ್ತಮ ವಾರ್ಷಿಕ ಆದಾಯವಿರುವ ಹಾಗೂ ಈಗಾಗಲೇ 5ನೇ ಪೇ ಕಮಿಷನ್ ಪ್ರಕಾರ ವೇತನ ಪಡೆಯುತ್ತಿರುವ “ಎ” ಮತ್ತು “ಬಿ” ಗುಂಪಿನ ದೇವಸ್ಥಾನಗಳಿಗೆ ಮಾತ್ರ ಅನ್ವಯವಾಗಲಿದ್ದು ವಾರ್ಷಿಕ ಆದಾಯ ಕಡಿಮೆಯಿರುವ “ಸಿ” ಗುಂಪಿನ ದೇವಸ್ಥಾನಗಳಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.
ಎಲ್ಲಾ ಮುಜರಾಯಿ ದೇವಸ್ಥಾನಗಳ ಅರ್ಚಕರು ಮತ್ತು ಸಿಬ್ಬಂದಿಗಳನ್ನು ಜೀವವಿಮೆ ಯೋಜನೆಯಡಿಯಲ್ಲಿ ತರಲಾಗುವುದೆಂದು ತಿಳಿಸಿದ ಅವರು ಇದರ ಪ್ರಥಮಹಂತವಾಗಿ ಇವರನ್ನು ಪ್ರಧಾನಮಂತ್ರಿ ಜೀವನಜ್ಯೋತಿ ಬೀಮಾ ಯೋಜನಾದಲ್ಲಿ ಸೇರಿಸಲಾಗುವುದೆಂದರು. ಇದಕ್ಕೆ ತಗಲುವ ತಲಾ ವಾರ್ಷಿಕ ಪ್ರೀಮಿಯಮ್ 330 ರೂಪಾಯಿಗಳನ್ನು ಸರ್ಕಾರವೇ ಭರಿಸಲಿದ್ದು ಇದಕ್ಕೆ ತಗಲುವ 1.22 ಕೋಟಿ ರೂಪಾಯಿಗಳನ್ನು ಸರಕಾರವೇ ಭರಿಸಲಿದೆಯೆಂದು ತಿಳಿಸಿದರಲ್ಲದೇ ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿಯವರೂ ಒಪ್ಪಿಗೆ ನೀಡಿದ್ದಾರೆಂದರು. ಇದಲ್ಲದೇ, ಮುಜರಾಯಿ ಇಲಾಖೆಯ ದೇವಸ್ಥಾನಗಳ ಅರ್ಚಕರ ಹಾಗೂ ಸಿಬ್ಬಂದಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಆರೋಗ್ಯ, ಜೀವನ, ಮತ್ತು ಅಪಘಾತ ವಿಮೆಯನ್ನು ನೀಡುವುದರ ಬಗ್ಗೆ ಪರಿಶೀಲಿಸಲಾಗುತ್ತಿದ್ದು ಇಲಾಖೆಯು ಇದಕ್ಕಾಗಿ ವಿಮಾ ಕಂಪನಿಗಳು ಮತ್ತು ಬ್ಯಾಂಕ್‌ಗಳಿಂದ ಕೊಟೇಶನ್‌ಗಳನ್ನು ಕೋರಲಾಗಿದೆ ಎಂದರು. ಈ ಸೌಲಭ್ಯ ಎಲ್ಲಾ ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿವರ್ಗದವರಿಗೂ ಅನ್ವಯವಾಗಲಿದೆಯೆಂದು ತಿಳಿಸಿದರು.
Karnataka Government to launch a mobile app to provide information about all Muzrai temples in the state
ಇದನ್ನೂ ಓದಿ: ದತ್ತಪೀಠ : ಮುಜಾವರ್ ನೇಮಕ ಆದೇಶ ರದ್ದು
ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪಡೆದ ನಿತ್ಯಶಿಲ್ಪಿ ಪ್ರಾಚಾರ್ಯ!
Discussion about this post