ಕನ್ನಡನಾಡಿ ಸುದ್ದಿ ಜಾಲ: ಭಾರತೀಯ ಪುರುಷರ ಹಾಕಿ ತಂಡದ ಅನುಭವಿ ಸ್ಟ್ರೈಕರ್ ಎಸ್.ವಿ.ಸುನಿಲ್ 14 ವರ್ಷಗಳ ಹಾಕಿ ಆಟಕ್ಕೆ ಇಂದು ವಿದಾಯ ಘೋಷಿಸಿದ್ದಾರೆ. ಟೋಕಿಯೋದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದ ಸುನಿಲ್, ಭಾರತದ ಪರ ಅನೇಕ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.
ದೇಶಕ್ಕಾಗಿ ನನ್ನ ಕೈಯಿಂದಾದ ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ. ಆದರೂ ಸಂತೋಷವಾಗಿದ್ದೇನೆಂದು ಹೇಳಿದರೆ ಅದು ನಿಮ್ಮೆಲ್ಲರಿಗೂ ಸುಳ್ಳು ಹೇಳಿದಂತಾಗುತ್ತದೆ. ಒಲಿಂಪಿಕ್ಸ್‌ನಲ್ಲಿ ನನ್ನ ತಂಡದ ಪರ ನಾನು ಕೂಡ ವೇದಿಕೆ ಹತ್ತಬೇಕು ಎಂದು ಕನಸು ಕಂಡಿದ್ದೆ. ದುರದೃಷ್ಟವಶಾತ್ ಅದು ನೆರವೇರಲಿಲ್ಲ. ಆದರೆ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದಿರುವುದು ವಿಶೇಷವಾದ ಭಾವನೆ ಎಂದಿರುವ ಅವರಲ್ಲಿ ವಿಷಾದ ಭಾವನೆ ಮನೆಮಾಡಿದೆ ಎನ್ನಲಾಗಿದೆ.
‘ನಾನು ತೆಗೆದುಕೊಂಡಿರುವ ನಿರ್ಧಾರ ಕೆಲವರಿಗೆ ವೈಯಕ್ತಿಕವಾಗಿ ನೋವುಂಟು ಮಾಡಿದ್ದರೂ, ಸರಿಯಾದ ನಿರ್ಧಾರ ಕೈಗೊಂಡಿದ್ದೇನೆ ಎಂಬ ಭಾವವಿದೆ’ ಎಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸುನಿಲ್ ಅವರು ‘ಅರ್ಜುನ ಪ್ರಶಸ್ತಿ’ ಪುರಸ್ಕೃತರಾಗಿದ್ದು, 2007ರಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದರು. ೨೦೦೭ರಲ್ಲೇ ಪಾಕ್ ವಿರುದ್ಧ ನಡೆದ ಏಷ್ಯಾಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ತಂಡ ಫೈನಲ್‌ನಲ್ಲಿ ಗೆಲುವು ಸಾಧಿಸಿತ್ತು.
ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಎರಡು ಸಲ ಪ್ರತಿನಿಧಿಸಿರುವ ಸುನಿಲ್, ಅನೇಕ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಪ್ರಮುಖವಾಗಿ ಭಾರತ 2011ರ ಏಷ್ಯನ್ ಚಾಂಪಿಯನ್ ಟ್ರೋಫಿಯಲ್ಲಿ ಚಿನ್ನ ಗೆದ್ದಿರುವ ತಂಡದ ಭಾಗವಾಗಿದ್ದರು.
2012ರ ಏಷ್ಯನ್ ಚಾಂಪಿಯನ್ ಟ್ರೋಪಿಯಲ್ಲಿ ಬೆಳ್ಳಿ, 2014ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ, 2018ರ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಾಗಲೂ ತಂಡದಲ್ಲಿದ್ದರು. 2016 ಹಾಗೂ 2018ರ FIH ಚಾಂಪಿಯನ್ ಟ್ರೋಪಿಯಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಎಸ್.ವಿ.ಸುನಿಲ್ ಹಾಕಿಗೆ ವಿದಾಯ ಘೋಷಣೆ ಮಾಡುತ್ತಿದ್ದಂತೆ ಇಂಡಿಯನ್ ಹಾಕಿ ಅವರ ಸೇವೆಗೆ ಅಭಿನಂದನೆ ಸಲ್ಲಿಸಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಪ್ರತಿನಿಧಿಸಿದ್ದ ಡ್ರ್ಯಾಗ್ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಹಾಗೂ ಡಿಫೆಂಡರ್ ಬೀರೇಂದ್ರ ಲಾಕ್ರಾ ಕೂಡ ನಿನ್ನೆ ಹಾಕಿಗೆ ನಿವೃತ್ತಿ ಘೋಷಣೆ ಮಾಡಿದ್ದರು.
Discussion about this post