ದರೋಡೆ ಪ್ರಕರಣವೊಂದರ ಆರೋಪಿಯೊಬ್ಬನನ್ನು ಹಿಡಿಯಲೆಂದು ತಮಿಳುನಾಡಿಗೆ ತೆರಳಿದ್ದ ಬೆಂಗಳೂರಿನ ಯಲಹಂಕ ಠಾಣೆಯ ಪೋಲಿಸ್ ಕಾನ್ಸ್ಟೇಬಲ್ ಶಿವಕುಮಾರ್ ರಾಥೋಡ್ ಸಾಹಸ ಮೆರೆದು ಆರೋಪಿಯ ಪ್ರಾಣ ಉಳಿಸಿದ ಸ್ವಾರಸ್ಯಕರ ಘಟನೆ ವರದಿಯಾಗಿದೆ.
ಕಳೆದ ಅಕ್ಟೋಬರ್ 3 ರಂದು ಬೆಂಗಳೂರು ಮೂಲದ ಉದ್ಯಮಿ ಶೇಖರ್ ರೆಡ್ಡಿಯವರಿಂದ ಹಣ ದೋಚಿದ್ದ ಪ್ರಕರಣದ ದೂರು ದಾಖಲಾಗಿತ್ತು. ಸಿಸಿಟಿವಿಯ ದಾಖಲೆಯಿಂದ ಆರೋಪಿಗಳನ್ನು ಪತ್ತೆ ಮಾಡಿದ ಬೆಂಗಳೂರು ಪೋಲಿಸರಿಗೆ ಆರೋಪಿಗಳು ಅಪರಾಧ ಮಾಡುವುದನ್ನೇ ಕಾಯಕಮಾಡಿಕೊಂಡಿದ್ದವರೆಂದು ತಿಳಿದುಬಂದಿತ್ತು.
ಪತ್ತೆಕಾರ್ಯದಲ್ಲಿ ತೊಡಗಿದ ಪೋಲಿಸರಿಗೆ ನಾಲ್ವರು ಆರೋಪಿಗಳು ತಮಿಳುನಾಡಿನ ಧರ್ಮಪುರಿ ಬಳಿಯ ಥೊಪ್ಪೂರು ಎಂಬ ಹಳ್ಳಿಯ ವಸತಿಗೃಹವೊಂದರಲ್ಲಿ ಇದ್ದಾರೆಂಬುದು ಗೊತ್ತಾಗಿತ್ತು. ಯಲಹಂಕ ಠಾಣೆಯ 6 ಮಂದಿ ಪೋಲೀಸ್ ಅಧಿಕಾರಿಗಳು ಗುರುವಾರ ಸ್ಥಳವನ್ನು ತಲುಪಿ ಆರೋಪಿಗಳು ಲಾಡ್ಜ್ನಿಂದ ಹೊರಬರುವುದನ್ನೇ ಕಾಯುತ್ತಿದ್ದರು.
ಸಂಜೆಯ ವೇಳೆ ಕಾಫಿಗೆಂದು ಹೊರಬಂದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೋಲೀಸರು ಮತ್ತೊಬ್ಬನಿಗಾಗಿ ಕಾಯುತ್ತಿದ್ದರು. ರಾತ್ರಿ ಸುಮಾರು 10 ಘಂಟೆಗೆ ಹೊರಬಂದ ಅವನು ಪೋಲೀಸರನ್ನು ನೋಡಿದೊಡನೇ ಬಂಧನದಿಂದ ತಪ್ಪಿಸಿಕೊಳ್ಳಲು ಹೊಲ-ಗದ್ದೆಗಳ ಪ್ರದೇಶಕ ಕಡೆ ಓಡತೊಡಗಿ ಆಕಸ್ಮಿಕವಾಗಿ ಸುಮಾರು 25 ಅಡಿ ಆಳದ ಬಾವಿಯೊಳಗೆ ಬಿದ್ದುಬಿಟ್ಟನು. ಬಾವಿಯೊಳಗಿನ ಗಿಡಗಂಟೆಗಳನ್ನು ಹಿಡಿದುಕೊಂಡಿದ್ದರೂ ಬಹಳ ಹೊತ್ತು ಅದೇ ಸ್ಥತಿಯಲ್ಲಿರಲು ಸಾಧ್ಯವಿರಲಿಲ್ಲ.
ಈಜು ಬರದೆ ಆತಂಕಗೊಂಡ ಆರೋಪಿಯು ಉಳಿಸುವಂತೆ ಗೋಗರೆಯತೊಡಗಿದಾಗ ನಾನು ಆ ಕಗ್ಗತ್ತಲಿನಲ್ಲೂ ಮೊಬೈಲ್ ಫೋನ್ಗಳ ಅಲ್ಪ ಬೆಳಕಿನ ಸಹಾಯದಿಂದಲೇ ಕೆಳಗಿಳಿದು ನೋಡಿದಾಗ ಅವನು ಪ್ರಜ್ಞೆ ಕಳೆದುಕೊಳ್ಳುವ ಹಂತ ತಲುಪಿದ್ದ ಎಂದು ಶಿವಕುಮಾರ್ ತಿಳಿಸಿದರು. ಮೆಟ್ಟಿಲುಗಳಿರದ ಬಾವಿಯಲ್ಲಿ ಹಗ್ಗ ಕಟ್ಟಿಕೊಂಡು ನಾನು ಹೋಗುವುದು ಇನ್ನು ಸ್ವಲ್ಪವೇ ತಡವಾಗಿದ್ದರೂ ಅವನು ಬದುಕುಳಿಯುವ ಸಾಧ್ಯತೆಯಿರಲಿಲ್ಲವೆಂದೂ ಅವರು ತಿಳಿಸಿದರು.
ಬೆಂಗಳೂರಿನ ಪೋಲೀಸ್ ಕಮಿಷನರ್ ಕಮಲ್ ಪಂಥ್ರವುರ ಶಿವಕುಮಾರ್ ರಾಥೋಡ್ರ ಕರ್ತವ್ಯಪ್ರಜ್ಞೆ ಹಾಗೂ ಸಾಹಾಸಕ್ಕೆ ಮೆಚ್ಚಿ ಇಲಾಖೆಯಿಂದ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.
Banglore police constable saves the life of an accused
ಇದನ್ನೂ ಓದಿ: ಪೊಲೀಸ್ ಮತ್ತು ಪ್ರಿಯಾಂಕಾ ನಡುವಿನ ಮಾತಿನ ಚಕಮಕಿ ಹರಿಯಬಿಟ್ಟ ಕಾಂಗ್ರೆಸ್
ಇದನ್ನೂ ಓದಿ: ಕಾನೂನು ಪಾಲನೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯ
Discussion about this post