ಮೊಯೀನ್ ಮುನೀರ್ ಅಲಿ – ಆಧುನಿಕ ಯುಗದ ಪ್ರತಿಭಾವಂತ ಆಲ್ರೌಂಡ್ ಕ್ರಿಕೆಟಿಗರಲ್ಲೊಬ್ಬರು. ಭಾರತೀಯ ಉಪಖಂಡದ ಮೂಲದವರಾದ ಇವರ ಅಜ್ಜ ಬಹಳ ಹಿಂದೆಯೇ ಕಾಶ್ಮೀರದ ಮೀರ್ಪುರ್ ಪ್ರದೇಶದಿಂದ ಇಂಗ್ಲೆಂಡ್ಗೆ ವಲಸೆ ಹೋಗಿ ಅಲ್ಲಿನವರೇ ಆದ ಬ್ರಿಟಿಷ್ ಮಹಿಳೆ ಬೆಟ್ಟಿ ಕಾಕ್ಸ್ರನ್ನು ವಿವಾಹವಾದರು. 18 ಜೂನ್ 1987ರಂದು ಜನಿಸಿದ ಮೊಯೀನ್ ಅಲಿ ಒಬ್ಬ ಪ್ರತಿಭಾವಂತ ಎಡಗೈ ಬ್ಯಾಟ್ಸ್ಮನ್ ಹಾಗೂ ಬಲಗೈ ಆಫ್-ಸ್ಪಿನ್ ಬೌಲರ್ ಆಗಿ ರೂಪುಗೊಂಡು ಇಂಗ್ಲೆಂಡ್ ತಂಡದ ಪರ ಆಡಲು ಪ್ರಾರಂಭಿಸಿದರು. ತಮ್ಮ ಬಾಲ್ಯದಲ್ಲಿ ಕ್ರಿಕೆಟಿಗರಾದ ಸಹೋದರ ಸಂಬಂಧಿ ಕಬೀರ್ ಅಲಿ ಹಾಗೂ ಸಹೋದರರಾದ ತಾಹಿರ್ ನಕಾಶ್ ಹಾಗೂ ರವೈತ್ ಖಾನ್ ರೊಂದಿಗೆ ಆಡಿ ತಮ್ಮ ಕ್ರಿಕೆಟ್ ಕೌಶಲವನ್ನು ಉನ್ನತಮಟ್ಟಕ್ಕೆ ಕೊಂಡೊಯ್ದರು.
ತಮ್ಮ 15ನೇ ವಯಸ್ಸಿಗೇ ವಾರ್ವಿಕ್ ಶೈರ್ ತಂಡದ ಪರವಾಗಿ ಆಡಿದ ಮೊಯೀನ್ ಅರ್ಧಶತಕದ ಸಾಧನೆ ಮಾಡಿದರು. ಇದಲ್ಲದೇ, ಕಿರಿಯರ ತಂಡದ ಸದಸ್ಯನಾಗಿ ಬಾಂಗ್ಲಾದೇಶ ಮತ್ತು ಭಾರತ ತಂಡಗಳ ವಿರುದ್ಧ ಆಡಿ ಅಲ್ಲಿಯೂ ಉತ್ತಮ ಸಾಧನೆ ಮಾಡಿದರು. ಪ್ರಥಮದರ್ಜೆ ಕ್ರಿಕೆಟ್ ಗೆ 2005ರಲ್ಲಿ ಪದಾರ್ಪಣೆ ಮಾಡಿದ ಮೊಯೀನ್ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ತಂಡದ ವಿರುದ್ಧ ಉತ್ತಮವಾಗಿ ಆಡಿ ಅಜೇಯ 57 ರನ್ ಗಳಿಸಿದರು. ನಂತರ, 2006ರಲ್ಲಿ ಕಿರಿಯರ (19ವರ್ಷ ಒಳಗಿನವರ) ತಂಡಕ್ಕೆ ಆಯ್ಕೆಯಾದ ಮೊಯೀನ್ ಅಲಿ ಒಂದು ಅರ್ಧಶತಕ, ಒಂದು ಶತಕ, ಹಾಗೂ ಏಳು ವಿಕೆಟ್ ಗಳನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದರು. ಇವರ ಈ ಅತ್ಯುತ್ತಮ ಸಾಧನೆ 2006ರ 19ವರ್ಷದೊಳಗಿನವರ ವಿಶ್ವಕಪ್ ತಂಡದ ನಾಯಕತ್ವವನ್ನು ಪಡೆಯಲು ನೆರವಾಯಿತು. ಈ ಪಂದ್ಯಾವಳಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಮೊಯೀನ್ 3 ಅರ್ಧಶತಕಗಳನ್ನು ಬಾರಿಸಿ 7 ವಿಕೆಟ್ಗಳನ್ನೂ ಪಡೆದು ಮಿಂಚಿದರು.
ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ 2014ರಲ್ಲಿ ಆಯ್ಕೆಯಾದ ಮೊಯೀನ್ ತಮ್ಮ ಶ್ರೇಷ್ಠಮಟ್ಟದ ನಿರ್ವಹಣೆಯಿಂದ 64 ಟೆಸ್ಟ್ ಪಂದ್ಯಗಳಲ್ಲಿ 195 ವಿಕೆಟ್ಗಳನ್ನು ಪಡೆದಿದ್ದಾರೆ ಹಾಗೂ 2914 ರನ್ಗಳನ್ನು ಗಳಿಸಿದ್ದಾರೆ. ಇವರ ಈ ಸಾಧನೆಯಲ್ಲಿ 14 ಅರ್ಧಶತಕಗಳು ಹಾಗೂ 5 ಶತಕಗಳು ಸೇರಿವೆ.
ಮೊಯೀನ್ ಅಲಿ ಅವರೇ ತಿಳಿಸಿರುವಂತೆ ಸೀಮಿತ ಓವರುಗಳ ಪಂದ್ಯಗಳ ಮೇಲೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳಿಂದ ನಿವೃತ್ತಿ ಹೊಂದುತ್ತಿರುವ ಅವರು ಸದ್ಯ ಯು.ಎ.ಇ.ಯಲ್ಲಿ ನಡೆಯುತ್ತಿರುವ ಹದಿನಾಲ್ಕನೇ ಅವೃತ್ತಿಯ ಐ.ಪಿ.ಎಲ್ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದು ತಮ್ಮ ಶ್ರೇಷ್ಠ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ 9 ಪಂದ್ಯಗಳನ್ನಾಡಿರುವ ಮೊಯೀನ್ ಒಂದು ಅರ್ಧಶತಕ ಸೇರಿದ 261 ರನ್ ಗಳಿಸಿದ್ದಾರೆ ಹಾಗೂ 5 ವಿಕೆಟ್ಗಳನ್ನೂ ಪಡೆದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಮಾಡಿ ನಿವೃತ್ತಿ ಹೊಂದಿರುವ ಹಾಗೂ ಸೀಮಿತ ಓವರುಗಳ ಮಾದರಿಯ ಪಂದ್ಯಾವಳಿಗಳಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಮೊಯೀನ್ ಅಲಿಯವರಿಗೆ ಶುಭ ಹಾರೈಸೋಣ.
Discussion about this post